ಜಗತ್ತಿನ ಎಲ್ಲ ಭಾಷೆಗಳು ಬೇರೆ ಭಾಷೆಗಳಿಂದ ಪದಗಳನ್ನು ಕೊಳ್ಳುತ್ತವೆ. ಇದು ಜಗತ್ತಿನ ಎಲ್ಲಡೆ ನಡೆಯುವ ಮಾಮೂಲಿ ವಿಷಯ. ಹಾಗೆ ಕನ್ನಡವೂ ಕೂಡ ಹಲವು ಭಾಷೆಗಳಿಂದ ಪದಗಳನ್ನು ಪಡೆದಿದೆ. ಅವನ್ನು ಕನ್ನಡಕ್ಕೆ ಹೊಂದಿಸಿಕೊಂಡು, ತನ್ನ ಪದಸಂಪತ್ತನ್ನು ಹೆಚ್ಚಿಸಿದೆ.
ಹೀಗೆ ಕನ್ನಡವು ಪಡೆದಿರುವ ಪದಗಳಲ್ಲಿ, ಅತಿಹೆಚ್ಚು ಪದಗಳು ಸಂಸ್ಕೃತದಿಂದ ಪಡೆದವು. ಅದರಲ್ಲೂ ಬರೆಯುವ ಕನ್ನಡದಲ್ಲೇ ಈ ಸಂಸ್ಕೃತಪದಗಳು ಹೆಚ್ಚು. ಆಡುಮಾತಲ್ಲಿ ಇನ್ನೂ ಸಂಸ್ಕೃತಪದಗಳು ಕಡಮೆ. ಆದರೆ ಸಂಸ್ಕೃತಪದಗಳ ಬಳಕೆ, ಕನ್ನಡಕ್ಕೆ ಕೆಲವು ಸಮಸ್ಯೆಗಳನ್ನು ತಂದಿದೆ.
ಸಂಸ್ಕೃತದ ಪದಗಳಿಂದ ಕನ್ನಡವು ಎದುರಿಸಬೇಕಾದ ತೊಂದರೆಗಳು.
1. ಸಂಸ್ಕೃತ ಬೆರೆತ ಕನ್ನಡವನ್ನು ಸಲೀಸಾಗಿ ಉಲಿಯಲು, ಬರೆಯಲು ಕಷ್ಟ. ಆದ್ದರಿಂದ ಹಲವು ಕನ್ನಡಿಗರ ಮಾತಲ್ಲಿ ಉಚ್ಚಾರದೋಷ ಹಾಗು ಬರೆವಣಿಗೆಯಲ್ಲಿ spelling ತಪ್ಪುಗಳು ಕಾಣುತ್ತವೆ. ಇದರಿಂದ ಬಹಳ ಬಹಳ ಕನ್ನಡಿಗರಿಗೆ spelling ತೊಂದರೆ ತಲೆದೋರಿದೆ.
2. ಸಂಸ್ಕೃತದ ಪದವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.
* ಮಾದರಿ: ಕನ್ನಡದಲ್ಲಿ goodಗೆ ಒಳ್ಳೆಯದು, ಚೆನ್ನಾಗಿರುವುದು ಎಂದು ಹೇಳುತ್ತೇವೆ. ಹಾಗೆ morningಗೆ ಬೆಳಿಗ್ಗೆ, ಮುಂಜಾನೆ, ಬೆಳಗು ಎಂದು ಹೇಳುವೆವು. ಆದರೆ “good morning”ಗೆ “ಶುಭೋದಯ” ಯಾಕೆ, ಹೇಗೆ? ಸಾಮಾನ್ಯ ಕನ್ನಡಿಗನಿಗೆ “ಶುಭೋದಯ” ಅಂದರೆ ಅದು “good morning” ಎಂದು ತಿಳಿಯುವುದು ಕಷ್ಟ. ಅದರ ಬದಲು “ಒಳ್ಳೆ ಬೆಳಿಗ್ಗೆಯಾಗಲಿ” ಅಂದರೆ ತಟ್ಟನೆ ತಿಳಿಯುತ್ತದೆ.
3. ಸಂಸ್ಕೃತ-ಪದಗಳಿಂದ ಕನ್ನಡ-ಪದಗಳ ಕಣ್ಮರೆ.
* ಮಾದರಿ:”ಸೂರ್ಯ” ಬಂದು “ನೇಸರ”, “ಆಕಾಶ” ಬಂದು “ಬಾನು”, “ಜೀವನ” ಬಂದು “ಬಾಳ್ವೆ”, “ವಾರ್ತೆ” ಬಂದು “ಸುದ್ದಿ”, “ಅನ್ನ” ಬಂದು “ಓಗರ”, “ಸಮಯ” ಬಂದು “ಹೊತ್ತು”, “ಔಷಧ” ಬಂದು “ಮದ್ದು” ಇನ್ನೂ ಮುಂತಾದವು ಕಣ್ಮರೆಯಾದವು.
4. ಕನ್ನಡದ ಪದಗಳ ಅರ್ಥ ಸಂಕುಚಿತವಾಗುವುದು, ಇಲ್ಲವೇ ಅವುಗಳನ್ನು ಕೀಳು ಅರ್ಥದಲ್ಲಿ ಬಳಕೆ.
* ಮಾದರಿ: “ಆಹಾರ”, “ಕೂಳು”ವಿನ ಅರ್ಥವನ್ನು ಸಂಕುಚಿತ ಮಾಡಿತು.
* ಮಾದರಿ: “ಪಡ್ದೆ”ಪದದ ನಿಜವಾದ ಅರ್ಥ ತರುಣ, “ಪಡತಿ” ಅಂದರೆ ತರುಣಿ. ಆದರೆ ಇಂದು “ಪಡ್ಡೆ”ಗೆ “ಪೋಲಿಹುಡುಗ” ಎಂಬ ಅರ್ಥ ಹತ್ತಿದೆ.
5. ಸಂಸ್ಕೃತದ ಪದದಿಂದ ವಾಕ್ಯರಚನೆಯಲ್ಲಿ ವ್ಯತ್ಯಾಸ.
* ಮಾದರಿ: “ಬರಿ ಹಾಲನ್ನು ಕುಡಿದು ಹೋದ”. ಇಲ್ಲಿ ಕನ್ನಡದ ’ಬರಿ’ಯ ಜಾಗದಲ್ಲ ಸಂಸ್ಕೃತ ’ಮಾತ್ರ’ ಬಂದರೆ, ವಾಕ್ಯವನ್ನು “ಹಾಲನ್ನು ಮಾತ್ರ ಕುಡಿದು ಹೋದ” ಎಂದು ಬರೆಯಬೇಕು ಹೊರತು, “ಮಾತ್ರ ಹಾಲನ್ನು ಕುಡಿದು ಹೋದ” ಎಂದು ಬರೆದರೆ ಅರ್ಥವಿರುವುದಿಲ್ಲ.
6. ಹೊಸಪದಗಳಿಗೆ ಸಂಸ್ಕೃತದ ಕಡೆ ನೋಡುವುದರಿಂದ, ಕನ್ನಡದಲ್ಲೇ ಪದಗಳನ್ನು ಹುಟ್ಟಿಸುವ, ಕಟ್ಟುವ, ಜಾಣತನ ಜನರಲ್ಲಿ ಇಲ್ಲದೇ ಹೋಗುವುದು. ಆ ಜಾಣತನದ ಕೊರತೆಯಿಂದ ಮುಂದೆ ಬರುವ ಎಲ್ಲ ಹೊಸ ಹೊಸ ಸಂಗತಿಗಳಿಗೆ ಪದಗಳಿಗಾಗಿ ಸಂಸ್ಕೃತ ಇಲ್ಲವೇ ಬೇರೆ ನುಡಿಯನ್ನೇ ಅವಲಂಬಿಸಬೇಕಾಗುತ್ತದೆ. ಇದರಿಂದ ಕನ್ನಡದ ಸ್ವಂತಿಕೆಗೆ ಹಾನಿ.
7. ಹೊಸಸಂಗತಿಗಳಿಗೆ ಮಾಡಿದ ಸಂಸ್ಕೃತದ ಪದಗಳು ತಪ್ಪು ತಪ್ಪು ಅರ್ಥಕೊಟ್ಟು, ಗೊಂದಲ ಎಬ್ಬಿಸುವುದು
* ಮಾದರಿ : “Artificial insemination” ( the placing of sperm/semen in the female reproductive tract by artificial means.) ಆದರೆ ಇದಕ್ಕೆ ಕನ್ನಡದಲ್ಲಿ ಮಾಡಿರುವ ಸಂಸ್ಕೃತದ ಪದ “ಕೃತಕ ಗರ್ಭಧಾರಣೆ” ( ಇಲ್ಲಿ ನಕಲಿ ಬಸಿರನ್ನು ಹಾಕುತ್ತಿಲ್ಲ , ಆದುದರಿಂದ ಗೊಂದಲ)
ಕನ್ನಡ ಮತ್ತು ಸಂಸ್ಕೃತದ ನಂಟು
ಕನ್ನಡವು, ಹಿಂದಿ ಮುಂತಾದವಂತೆ ಸಂಸ್ಕೃತದಿಂದ ಬಂದ ನುಡಿಯಲ್ಲ. ಕನ್ನಡಕ್ಕೆ ತನ್ನದೇ ಆದ ಹುಟ್ಟಿದೆ. ಸಂಸ್ಕೃತಕ್ಕೆ ಪಾರಸೀ, ಜೆರ್ಮನ್, ರಷ್ಯನ್, ಇಂಗ್ಲೀಷು, ಮುಂತಾದ ನುಡಿಗಳಿಗೆ ನಂಟಿದ್ದು, ಅದು Indo-European ನುಡಿಗುಂಪಿಗೆ( language family )ಗೆ ಸೇರಿದೆ. ಆದರೆ ಕನ್ನಡಕ್ಕೆ ತಮಿಳು, ತುಳು, ತೆಲುಗು, ಮಲಯಾಳಂ ಮುಂತಾದ ನುಡಿಗಳೊಂದಿಗೆ ನಂಟಿದ್ದು, ಅದು ದ್ರಾವಿಡ ನುಡಿಗುಂಪಿಕ್ಕೆ ಸೇರುವುದು.
ಆದುದರಿಂದ ಕನ್ನಡ ಮತ್ತು ಸಂಸ್ಕೃತದ ನಡುವೇ ಬಹಳ ಬಹಳ ವ್ಯತ್ಯಾಸಗಳಿವೆ. ಸಂಸ್ಕೃತದ ವಾಕ್ಯರಚನೆ, ಲಿಂಗಗಳು, pronoun, ವಿಭಕ್ತಿ, ಮುಂತಾದ ವ್ಯಾಕರಣಗಳು ಕನ್ನಡದಕ್ಕಿಂತ ಬಹಳ ಭಿನ್ನ ಮತ್ತು ಕನ್ನಡಕ್ಕೆ ಹೊಂದುವುದಿಲ್ಲ.
ಕನ್ನಡಕ್ಕೆ ಹೇಗೆ ಸಂಸ್ಕೃತಪದಗಳು ನುಸುಳಿದವು?
ಹಳೆಗನ್ನಡದ ಕಾಲದಲ್ಲಿ ಕನ್ನಡವನ್ನು ಓದುವುದು, ಬರೆಯುವುದನ್ನು ಸಾಮಾನ್ಯ ಜನರು ಮಾಡುತ್ತಿರಲಿಲ್ಲ. ಓದು-ಬರಹ ಬರಿ ಸಂಸ್ಕೃತ-ಕನ್ನಡವನ್ನು ತಿಳಿದ ಪಂಡಿತರು ಮಾಡುತ್ತಿದ್ದರು. ಇಂದು ಇಂಗ್ಲೀಷು ಕಲಿತವರು ಎಗ್ಗಿಲ್ಲದೆ ಇಂಗ್ಲೀಷಿನ ಪದಗಳನ್ನು ಕನ್ನಡದಲ್ಲಿ ಬೆರಸುವಂತೆ, ಆಗ ಸಂಸ್ಕೃತ ಕಲಿತ ಪಂಡಿತರು ಕನ್ನಡದಲ್ಲಿ ಹೇರಳವಾಗಿ ಸಂಸ್ಕೃತ ತುಂಬಿದರು. ಹಳೆಗನ್ನಡದಲ್ಲಿ ಸಂಸ್ಕೃತಪದಗಳು ತುಂಬಿ ತುಳುಕಲು ಶುರುವಾಯಿತು. ಇವು ಪಂಡಿತರಿಗಾಗಿ, ಆಳುವ ದೊರಗಳಿಗಾಗಿ ಬರೆದ ಸಾಹಿತ್ಯ, ಸಾಮಾನ್ಯಜನರಿಗಾಗಿ ಅಲ್ಲ. ಅಂದಿನಿಂದ ಬಂದ ಸಂಸ್ಕೃತಪದಗಳೂ ಇವೆ.
ತರುವಾಯ ಬಸವಣ್ಣ ಮೊದಲಾದವರಿಂದ ಹಲವು ಬದಲಾವಣೆಗಳಾದವು. ವಚನ ಸಾಹಿತ್ಯ, ಜನಪದ, ಅಂಡಯ್ಯನಂತಹವರ ಕಾವ್ಯ, ದಾಸ ಸಾಹಿತ್ಯ ಮುಂತಾದವು ಸಾಮಾನ್ಯ ಜನರಿಗಾಗೇ, ಅವರ ಅರಿವಿಗಾಗೇ ಬರೆದವು. ಇವು ಆಡುಮಾತಿಗೆ ಹತ್ತಿರವಾದ ಭಾಷಾಶೈಲಿಯಲ್ಲಿ ಅರಳಿದವು.
ಈ ಸಾಹಿತ್ಯದ ಮುಖ್ಯ ಲಕ್ಷಣಗಳು:
1. ಹೆಚ್ಚು ಹೆಚ್ಚು ಕನ್ನಡಪದಗಳು, ಕಡಮೆ ಸಂಸ್ಕೃತಪದಗಳು.
* ಮಾದರಿ: ಅಕ್ಕಜ – ಅಸೂಯೆ, ಅಚ್ಚುಗ – ಮೋಹ, ಇಕ್ಕೆ – ಸ್ಥಾನ, ಅಳಬಳ-ಶಕ್ತಿ, ಅಣ್ಣೆ-ಶುದ್ಧ ಮುಂತಾದವು. ಕನ್ನಡದ್ದೇ ಪದಗಳಿಗೆ ಒತ್ತು.
2. ಸರಳತೆ ಮತ್ತು ಶ್ರವಣತೆ; ಕನ್ನಡದ ಕಿವಿಗೆ ಹದವಾಗಿ ರಚನೆ ಮಾಡಿದವು. ಕನ್ನಡಕ್ಕೆ ಹದವಲ್ಲದ ಹಲವು ಸಂಸ್ಕೃತಪದಗಳ ಕಡಮೆ ಬಳಕೆ.
3. ಅನಗತ್ಯವಾಗಿ ಅಲಂಕಾರಗಳನ್ನು ಬಳಸದೇ, ವಿಷಯಕ್ಕೆ ಒತ್ತು. ಕಾವ್ಯದ ಚೆಲುವಿಗಿಂತ ಅದರ ಮಾಹಿತಿಗೆ ಮಹತ್ವ.
4. ವಿಚಾರಗಳು ಸರಳ ಮತ್ತು ಸುಲಭವಾಗಿ ವಿವೇಚನೆಗೆ ಸಿಗುವಂತೆ ಮಾಡಿದುದು. ಓದಿದನ್ನು ಅರಿಯಲು ಹೆಚ್ಚು ಹೆಣಗಬೇಕಾಗದಂತೆ.
5. ಕನ್ನಡದ ಪದಗಳು ಉಲಿಯಲು ಸರಳಗೊಳಿಸಿದ್ದು. ಇರ್ದ => ಇದ್ದ, ನಿಲ್ತು => ನಿಂತು, ಬೀಳ್ತು => ಬಿತ್ತು, ವೇಳ್ಕುಂ=> ಬೇಕು, ಎರ್ಮೆ=>ಎಮ್ಮೆ, ಗೆಲ್ದು => ಗೆದ್ದು, ಪೆರ್ಮೆ => ಹೆಮ್ಮೆ, ಒಲ್ಮೆ=>ಒಲುಮೆ
6. ಸಂಸ್ಕೃತದ ಪದಗಳನ್ನು ತದ್ಭವಗಳನ್ನಾಗಿ ಮಾಡಿ( ಕನ್ನಡಕ್ಕೆ ಹೊಂದಿಸಿ ) ಬಳಸಿದ್ದು. ಮಾದರಿ: ಯಶಸ್ => ಜಸ, ಪ್ರಜ್ವಲ => ಪಜ್ಜಳ…..ಮುಂತಾದವು
ಈ ಕನ್ನಡವೇ ಮುಂದೆ ಹೊಸಗನ್ನಡದ ಹುಟ್ಟಿಗೆ ಕಾರಣವಾಯಿತು. ಇಲ್ಲಿ ಆದ ಬದಲಾವಣೆಗಳು ಹೊಸಗನ್ನಡದಲ್ಲಿ ಮುಖ್ಯವಾಗಿ ಕಾಣಸಿಗುವುದು.
ಆದರೆ….
ಈ ವಚನ ಸಾಹಿತ್ಯದ ಕಾಲದವರು ಕನ್ನಡವನ್ನು ಸರಳಗೊಳಿಸಿದ ಬಳಿಕ ಬಂದ ಹಲವರು ಸಂಸ್ಕೃತ ಪದಗಳನ್ನು ತದ್ಭವಗಳನ್ನು ಮಾಡದೇ ನೇರವಾಗಿ ಬಳಸಲು ಶುರುಮಾಡಿದರು. ಇದರಿಂದ ಜನಸಾಮಾನ್ಯರಿಗೆ ಅಂತಹ ಕನ್ನಡದಲ್ಲಿ ಉಲಿಯಲು ಬರೆಯಲು ಕಷ್ಟವಾಗಲು ಶುರುಮಾಡಿತು. ಅಂದರೆ ತದ್ಭವಗಳನ್ನು ಮಾಡಿ, ಕನ್ನಡಕ್ಕೆ ಸಂಸ್ಕೃತಪದಗಳನ್ನು ಹೊಂದಿಸುತ್ತಿದ್ದ ಕ್ರಿಯೆ ಸಂಪೂರ್ಣ ನಿಂತೇ ಹೋಗಿ, ಬದಲಿಗೆ ಸಂಸ್ಕೃತದಿಂದ ನೇರವಾಗಿ ಪದಗಳ ಬಳಕೆ ಹೆಚ್ಚಿತು, ಇಂದು ಇನ್ನೂ ಹೆಚ್ಚುತ್ತಾ ಇದೆ.
ಈ ಕೆಳಗಿನ ಪಟ್ಟಿ ಅದರ ಒಂದು ನೋಟವನ್ನು ಕೊಡುವುದು
ಸಂಸ್ಕೃತ ಮೂಲ – ವಚನಕಾಲದ ತದ್ಭವ – ಹೊಸಗನ್ನಡದ ಬಳಕೆ
ಯಶಸ್ – ಜಸ – ಯಶಸ್ಸು
ಕಾವ್ಯ – ಕಬ್ಬ – ಕಾವ್ಯ
ಸಂಸ್ಕೃತ – ಸಕ್ಕದ – ಸಂಸ್ಕೃತ
ನಿದ್ರಾ – ನಿದ್ದೆ/ನಿದಿರೆ – ನಿದ್ರೆ
ಪತಿವ್ರತೆ – ಹದಿಬದೆ – ಪತಿವ್ರತೆ
ಋಷಿ – ರಿಸಿ – ಋಷಿ
ಪ್ರಜ್ವಲ – ಪಜ್ಜಳ – ಪ್ರಜ್ವಲ
ದರ್ಶನ – ದರುಸನ – ದರ್ಶನ
ಮಾರ್ಜನ – ಮಜ್ಜನ – ಮಾರ್ಜನ
ವರ್ಷ – ವರುಸ – ವರ್ಷ
ಶೃಂಗಾರ -ಸಿಂಗಾರ -ಶೃಂಗಾರ
ಇದರ ಜೊತೆ ಇನ್ನೂ ಹಲವು ಕಾರಣಗಳಿವೆ.
ಹೊಸಗನ್ನಡದಲ್ಲಿ ಸಂಸ್ಕೃತಪದಗಳು ಹೆಚ್ಚಾಗಲು ಕಾರಣಗಳು ಇವು:
1. ಸರಕಾರದ ಬರಹಗಳಲ್ಲಿ, ಹೆಸರುಗಳಲ್ಲಿ, ಆಡಳಿತ ಭಾಷೆಯಲ್ಲಿ ಸಂಸ್ಕೃತಪದಗಳನ್ನೇ ಅವಲಂಬಿಸಿರುವುದು.
* ಮಾದರಿ: “ಬೃಹತ್ ಬೆಂಗಳೂರು” ಅನ್ನು “ದೊಡ್ಡ ಬೆಂಗಳೂರು” ಎನ್ನಬಹುದಿತ್ತು
* ಮಾದರಿ: “ಪ್ರಶಸ್ತಿ ಪ್ರದಾನ ಸಮಾರಂಭ” ಅನ್ನು “ಬಿರುದು ಕೊಡುವ ಕೂಟ” ಎನ್ನಬಹುದು.
2. ಎಲ್ಲ ಹೊಸಪದಕ್ಕೆ ಸಂಸ್ಕೃತದ ಕಡೆಗೆ ನೋಡುವುದು, ಸಂಸ್ಕೃತಪದಗಳಿಗೆ ಒತ್ತುಕೊಡುವುದು. ಮತ್ತೆ ಹೊಸಪದದ ರಚನೆಯಲ್ಲಿ ಕನ್ನಡದ ಪದಗಳನ್ನು ಕಡೆಗಣಿಸಿರುವುದು.
* ಮಾದರಿ: “outerspace”ಗೆ ಕನ್ನಡದಲ್ಲಿ ಬಳಕೆಯಲ್ಲಿ ಇರುವ ಪದ “ಬಾಹ್ಯಾಕಾಶ” ಎಂದ ಸಂಸ್ಕೃತದಿಂದ ಪಡೆದ ಪದ. ಆದರೆ ಇದನ್ನೇ ಕನ್ನಡದಲ್ಲಿ “ಹೊರಬಾನು”( ಹೊರಗಿನ ಬಾನು ) ಎಂದು ಸುಲಭವಾಗಿ ಹೇಳಬಹುದು
* ಮಾದರಿ: “ಕುಕ್ಕುಟ ಪಾಲನಾ ಇಲಾಖೆ”ಯನ್ನು “ಕೋಳಿ ಸಾಕಣೆ ಇಲಾಕೆ” ಅನ್ನಬಹುದಿತ್ತು.
* ಮಾದರಿ: “ಪಶುಸಂಗೋಪನಾ ಇಲಾಖೆ”ಯನ್ನು “ದನ ಸಾಕಣೆ ಇಲಾಕೆ”ಅನ್ನಬಹುದಿತ್ತು.
* ಮಾದರಿ: “ನೇತ್ರ ಚಿಕಿತ್ಸಾಲಯ”ವನ್ನು “ಕಣ್ಣು ಆಸ್ಪತ್ರೆ” ಅನ್ನಬಹುದು
* ಮಾದರಿ: “ದಂತ ಚಿಕಿತ್ಸಾಲಯ”ವನ್ನು “ಹಲ್ಲು ಆಸ್ಪತ್ರೆ” ಅನ್ನಬಹುದು.
ಗಮನಿಸಿ, ನಾವು ಹಲ್ಲು ನೋವಿದ್ದರೆ “ಹಲ್ಲು ನೋಯುತ್ತಿದೆ” ಎನ್ನವೆವು ಹೊರತು “ದಂತ ನೋಯುತ್ತಿದೆ” ಎಂದು ಎಂದೂ ಹೇಳುವುದೇ ಇಲ್ಲ.
3. ಶಿಷ್ಟಭಾಷೆ, ಸಭ್ಯಭಾಷೆ ಅಂದರೆ ಅದರಲ್ಲಿ ಸಂಸ್ಕೃತ ಪದಗಳು ಹೆಚ್ಚು ಇರಬೇಕು ಎಂಬಂತೆ ಜನರ ಮನದಲ್ಲಿ ಭಾವನೆ ಮೂಡಿರುವುದು.
* “ಸಮಸ್ತರಿಗೂ ಯುಗಾದಿಯ ಶುಭಾಶಯಗಳು” ಎಂದು ಹೇಳುವದನ್ನು ಕನ್ನಡದಲ್ಲಿ “ಎಲ್ಲರಿಗೆ ಉಗಾದಿ ಒಳ್ಳೆಯದು ಮಾಡಲಿ” ಎಂದು ಹೇಳಬಹುದು.
4. ನಾವು ಕೇಳುವ ಭಾಷಣಕಾರರು, ಬರಹಗಾರರು, ಸುದ್ದಿ ಪೇಪರುಗಳು, ಟಿ.ವಿ. ಚಾನಲ್ಲುಗಳು ಹೇರಳವಾಗಿ ಸಂಸ್ಕೃತಪದಗಳನ್ನು ಬಳಸುತ್ತಿರುವುದು.
5. ಶಾಲೆಯಲ್ಲಿ ಹೆಚ್ಚು ಸಂಸ್ಕೃತ ಬೆರೆತ ಕನ್ನಡದಲ್ಲಿ ಕಲಿಕೆ. ಅದರಲ್ಲೂ ಕನ್ನಡ ಮಾಧ್ಯಮದ ಗಣಿತ, ವಿಜ್ಞಾನ, ಮೊದಲಾದ ವಿಷಯಗಳಲ್ಲಿ ಹೇರಳವಾದ ಸಂಸ್ಕೃತಪದಗಳ ಬಳಕೆ.
6. ಸಂಸ್ಕೃತಪದಗಳನ್ನು ಕನ್ನಡಕ್ಕೆ ಹೊಂದಿಸುವ ಕ್ರಿಯೆಯನ್ನು ನಡೆಸದೇ(ತದ್ಭವಗೊಳಿಸದೇ), ಸಂಸ್ಕೃತದಿಂದ ನೇರವಾಗಿ ಪದಗಳ ಬಳಕೆ. …..ಮುಂತಾದವು.
ಈ ಕಾರಣಗಳು ಕನ್ನಡವನ್ನು ಮತ್ತೆ ಹಳೆಗನ್ನಡದಂತೆ ಪಂಡಿತರ ಭಾಷೆಯನ್ನಾಗಿ ಮಾಡಿ, ಜನಸಾಮಾನ್ಯರಿಗೆ ಕಠಿಣವಾಗಿ ಮಾಡುತ್ತಿವೆ. ಸರಳವಾಗಿದ್ದ ಕನ್ನಡ ಮತ್ತೆ ಗೋಜಲು ಆಗುತ್ತಿದೆ. ಬರಹದ ಕನ್ನಡಕ್ಕೂ, ಆಡು ಕನ್ನಡಕ್ಕೂ ಅಂತರ ನಿಲುಕಷ್ಟು ಹೆಚ್ಚಿದೆ, ಇನ್ನೂ ಹೆಚ್ಚಾಗುತ್ತಿದೆ.
ಇದರಿಂದ ಹೆಚ್ಚು ಮಂದಿ ಕನ್ನಡಿಗರು ಸಂಸ್ಕೃತ ಬೆರೆತ ಕನ್ನಡವನ್ನು ಸರಿಯಾಗಿ ಹೇಳಲಾರದೇ, ಬರೆಯಲಾರದೇ ಕಷ್ಟಪಡುತ್ತಾರೆ. ಅದರಿಂದ ಕೀಳರಿಮ ಪಡುತ್ತಾರೆ. ಕನ್ನಡದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ.
ಇನ್ನು ಕೆಲವರೋ, ಮಧ್ಯಾಹ್ನ( ಹಗಲಿನ ನಡು, ನಡುವಗಲು )ವನ್ನು, ಮದ್ಯಾನ್ನ( ಹೆಂಡದ ಓಗರ/ಅನ್ನ ) ಎಂದು ಹೇಳಿ, ನಾವು ಸಕ್ಕತಾಗಿ ಮಾತಡುತ್ತಿದ್ದೇವೆ ಎಂಬ ಭ್ರಾಂತಿಯಲ್ಲಿ ಇರುವರು. ಇಂತಹ ‘ಮದ್ಯಾನ್ನ’ದವರು ಒಂದೆಡೆಯಾದರೆ,
ಇನ್ನು ಕೆಲವರು ಯಾವುದೋ ಡ್ರಾಮದಲ್ಲಿ ನುಡಿಯುವಂತೆ ಬಹಳ ಎಚ್ಚರಿಕೆ ಮಾಡಿ, ಒಂದೊಂದು ಅಕ್ಕರವನ್ನು ಕಷ್ಟಪಟ್ಟು ಉಲಿಯುವರು. ಅದು ಹಳೆನಾಟಕದ ನಕಲಿ ಮಾತುಗಳಂತೆ ತೋರಿ, ಅವರು ಹೇಳುವುದೇ ಸರಿಯಾಗಿ ತಿಳಿಯದೇ ಹೋಗುವುದು.
ಇದರ ಬಗ್ಗೆ ತುಸು ಕನ್ನಡಿಗರು ಆಳವಾಗಿ ಯೋಚಿಸಲೇ ಬೇಕು.
ಕನ್ನಡಿಗರು ಮಾತ್ರ ಕೆಲವು ಶಬ್ದಗಳನ್ನು ಉಚ್ಚಾರ ಮಾಡಲಾರದವರೇ? ಇದು ದೋಷವೇ? ಕೊರತೆಯೇ?
ಯಾವ ಕನ್ನಡಿಗನಿಗೂ ಕನ್ನಡದದ್ದೇ ಆದ ಯಾವ ಪದವನ್ನು ಉಲಿಯುವಲ್ಲಿ ತೊಂದರೆ, ತೊಡರಿಲ್ಲ. ತೊಂದರೆ ಇರುವುದು ಸಂಸ್ಕೃತದಂತಹ ಬೇರೆನುಡಿಯಿಂದ ಪಡೆದ ಪದಗಳಿಂದ.
ಹೆಚ್ಚು ಹಿಂದಿಯವರಿಗೆ “ಳ” ಉಲಿಯಲು ಆಗದು. ಇಂಗ್ಲೀಷರಿಗೆ “ಕನ್ನಡ” ಎಂದು ಹೇಳಲಾಗದೆ “canara/ಕೆನರಾ” ಎಂದರು, “ಬೆಂಗಳೂರು” “ಬ್ಯಾಂಗಲೋರ್”ಆಯಿತು. ಕನ್ನಡಿಗರು ಸಲೀಸಾಗಿ ಉಲಿಯುವ ತೊಡರು, ತೊಡಗು, ಬೆರಳು, ಏಳ್ಗೆ, ಬಾಳ್ಗೆ ಇವನ್ನು ಹೇಳಲು, ಬೇರೆಯವರಿಗೆ ಕಷ್ಟ ಎಂಬುದನ್ನು ನೆನೆಪಿಡಬೇಕು.
ನಾವು ಕನ್ನಡಿಗರು ಒಬ್ಬರು ನಮ್ಮ ಕನ್ನಡದ ಪದಗಳನ್ನು ತಪ್ಪು ಉಲಿದರೂ ಅವರನ್ನು ಕೀಳೆಂದು ಕಾಣದೇ ಹೊಂದಿಕೊಂಡು ಹೋಗುವುದು, ನಮ್ಮ ದೊಡ್ಡ ಗುಣ.
ಹೀಗೆ ಒಂದು ಭಾಷೆಯನ್ನಾಡುವ ಜನಾಂಗ ಬೇರೊಂದು ಭಾಷೆಯ ಪದಗಳನ್ನು ಸರಿಯಾಗಿ ಉಲಿಯದೇ ಇರುವುದು ಸರ್ವೇಸಾಮಾನ್ಯ.
ಆದುದರಿಂದ
ಕೆಲವು ಸದ್ದುಗಳನ್ನು ಸರಿಯಾಗಿ ಉಲಿಯದೇ ಇರುವುದು ಎಲ್ಲ ಜನಾಂಗಗಳ ಸಹಜ ಸ್ವಭಾವ. ಅದು ದೋಷವೂ ಅಲ್ಲ, ಕೊರತೆಯೂ ಅಲ್ಲ.
ಹಾಗೆ ಕೆಲವು ಅಕ್ಕರಗಳು ಇಲ್ಲವೆಂದು, ಯಾವ ನುಡಿಯ ಹಿರಿಮೆ ತಗ್ಗುವುದಿಲ್ಲ.!
ಹಾಗಾದರೆ.
ಕನ್ನಡದ ನಾಲಗೆಗೆ ಹೊಂದದ ಪದಗಳನ್ನು ಕಂಡುಹಿಡಿಯುವುದು ಹೇಗೆ?
೧. ಮಹಾಪ್ರಾಣಗಳು(ಖ,ಘ, ಛ, ಝ, ಠ, ಢ, ಫ, ಭ ), ಶ, ಷ, ಋ, ೠ, ಅಃ ಮುಂತಾದವು ಕನ್ನಡದ ಪದಗಳಲ್ಲಿ ಇಲ್ಲ. ಅವು ಕನ್ನಡದ ನಾಲಗೆಗೆ ಹೊಂದುವುದಿಲ್ಲ. ಇವು ಬರಿ ಬೇರೆನುಡಿಯ ಪದಗಳಲ್ಲಿ ಕಾಣಸಿಗುವುವು.
ಮಾದರಿ: ಕೃತಿ, ವಿಶೇಷ, ಕ್ಲೃಪ್ತಂ, ಖಡ್ಗ, ಪ್ರಾತಃಕಾಲ, ಬೃಹತ್, ಛಾಯಾ, ಕೃತಕ, ಶೀಘ್ರಲಿಪಿ, ಮುಖ್ಯೋಪಾದ್ಯಾಯ, ಋಷಿ, ನಿಘಂಟು, ದಾಖಲು, ತಾರೀಖು.
ಅಂದರೆ
“ಅ ಆ ಇ ಈ ಉ ಊ ಎ ಏ ಐ ಒ ಓ ಔ ಅಂ
ಕ ಗ
ಚ ಜ
ಟ ಡ ಣ
ತ ದ ನ
ಪ ಬ ಮ
ಯ ರ ಲ ವ ಸ ಹ ಳ”
ಒಟ್ಟು ಮುವ್ವತ್ತಮೂರು ಅಕ್ಕರಗಳು. ಈ ಮುವ್ವತ್ತಮೂರು ಅಕ್ಕರಗಳನ್ನು ಬಿಟ್ಟು ಬೇರೆ ಯಾವ ಅಕ್ಕರ ಇದ್ದರೂ ಅದ ಕನ್ನಡದ್ದಲ್ಲ. ಕನ್ನಡದ ನಾಲಗೆಗೆ ಸರಿಬರುವುದಿಲ್ಲ.
೨. ಕನ್ನಡದಲ್ಲಿ ಇರದ ಒತ್ತಕ್ಕರಗಳು ಸ್ಯ, ಹ್ಯ, ತ್ಸ, ಹ್ಮ, ವ್ಯ, ಪ್ರ, ಸ್ವ, ತ್ರ್‍ಯ, ಜ್ಞ, ಡ್ಗ, ತ್ರ, ಗ್ನ, ನ್ಯ, ಣ್ಯ, ದ್ವ, ದ್ಯ, ಸ್ಮ, ಕ್ವ, ಕ್ಲ, ಪ್ಲ, ಮುಂತಾದವೂ ಕನ್ನಡದ ಪದಗಳಲ್ಲಿ ಇಲ್ಲ. ಇವು ಬರಿ ಬೇರೆನುಡಿಯ ಪದಗಳಲ್ಲಿ ಇರುವುವು.
ಮಾದರಿ:ವ್ಯತ್ಯಾಸ, ಉತ್ಸವ, ಸದಸ್ಯ, ಅಸಹ್ಯ, ಬ್ರಹ್ಮ, ಪ್ರಕೃತಿ, ಸ್ವಲ್ಪ, ಯಜ್ಞ, ಖಡ್ಗ, ಪತ್ರ, ಅಗ್ನಿ, ನಗ್ನ, ಅನ್ಯ, ನಾಣ್ಯ, ದ್ವಿತೀಯ, ವಿದ್ಯಾ, ಸ್ಮರಣೆ, ಕ್ವಚಿತ್, ಶುಕ್ಲ, ವಿಪ್ಲವ,
ಕನ್ನಡದಲ್ಲಿ ಒಂದು ವ್ಯಂಜನಕ್ಕೆ ಬೇರೊಂದು ವ್ಯಂಜನವು ಒತ್ತಕ್ಕರವಾಗಿ ಬರುವುದು ಬಹಳ ಕಡಮೆ. ಅಂದರೆ ಕ್ಕ, ಗ್ಗ, ಚ್ಚ.. ತರಹದವು ಹೆಚ್ಚು, ಕ್ವ, ಗ್ತ, ಜ್ಯ, ಡ್ರ, ಸ್ಕ, ಜ್ಪ ತರಹದವು ಇಲ್ಲವೇ ಇಲ್ಲ ಎಂದು ಹೇಳಬಹುದು.
ಒಂದು ವೇಳೆ ಅವು ಬಂದರು ಅವು ಬರಿ ರ,ಲ,ಳ ಗಳಿಗೆ ಒತ್ತಾಗಿ ಇರುವವು.
ಮಾದರಿ: ತೀರ್ಪು, ಆರ್ಪು, ತಾಳ್ಮೆ, ನಲ್ಮೆ, ಬಲ್ಮೆ. (ಇವನ್ನು ಹೊಸಗನ್ನಡದಲ್ಲಿ ತೀರುಪು, ಆರುಪು, ತಾಳುಮೆ, ನಲುಮೆ, ಬಲುಮೆ ಅಂತ ಬರೆಯಲೂ ಬಹುದು.)
೩. “ಯ ರ ಲ ವ ಸ ಹ ಳ” ಗಳ ಮುಂದೆ ಅನುಸ್ವರ(೦) ಕನ್ನಡದಲ್ಲಿ ಬರುವುದಿಲ್ಲ.
ಮಾದರಿ: ಹಂಸ, ಸಂಯುಕ್ತ, ಸಂವಾದ, ಸಂಹಿತೆ, ಸಂವಿಧಾನ, ಸಂಸ್ಕೃತ, ಸಂಸ್ಥೆ, ಸಂಸ್ಕಾರ, ಸಂಸ್ಕರಣೆ, ಸಂಸ್ಮರಣೆ, ಅಂಶ,
೪. ಪದಗಳ ನಡುವೆ ಕನ್ನಡದಲ್ಲಿ ಸಾಮಾನ್ಯವಾಗಿ ‘ಹ’ ಬರುವುದಿಲ್ಲ.
ಮಾದರಿ: ಆಹಾರ, ವಿಹಾರ, ಸಂಹಾರ, ಪ್ರತ್ಯಾಹಾರ, ಸಸ್ಯಹಾರ, ಮಾಂಸಹಾರ
ಈ ಸಮಸ್ಯೆಗೆ ಪರಿಹಾರವೇನು?
೧. ಸಂಸ್ಕೃತಪದಗಳ ಬಳಕೆ ಕಡಮೆ ಮಾಡಿ, ಕನ್ನಡದ್ದೇ ಪದಗಳನ್ನು ಬಳಸುವುದು. ಕನ್ನಡದ್ದೇ ಆದ ಪದಗಳಲ್ಲಿ ಕನ್ನಡಿಗರು ಉಲಿಯಲಾಗದ ಶಬ್ದಗಳಿಲ್ಲ. ಇದಕ್ಕೆ ಕನ್ನಡದಲ್ಲೇ ಹೆಚ್ಚು ಪದಗಳನ್ನು ಕಟ್ಟಬೇಕು. ಅಚ್ಚಕನ್ನಡದ ಪದಗಳನ್ನೇ ಹುಡುಕಿ ಬಳಸಬೇಕು. ಆಡು ಮಾತಿನ ಪದಗಳನ್ನು ಬಳಸಬೇಕು
ಮಾದರಿ : “ಶಿಕ್ಷಣ”ವನ್ನು”ಕಲಿಕೆ”, “ಪುರುಷರು”ಅನ್ನು”ಗಂಡಸರು”,”ಮಹಿಳೆಯರು”ಅನ್ನು”ಹೆಂಗಸರು”, “ಅಗ್ನಿ ಶಾಮಕ ದಳ” ಅನ್ನು “ಬೆಂಕಿ ನಂದಿಸುವ ಪಡೆ”, “ನಿರೀಕ್ಷಕ” ಅನ್ನು “ಕಾಯುವಾಳು”, “ಪ್ರಾಧ್ಯಾಪಕ” ಅನ್ನು “ಹಿರಿ ಕಲಿಸುವಾಳು”, ಹೀಗೆ ಮಾರ್ಪಾಟು ಮಾಡುವುದು.
೨. ಕನ್ನಡಕ್ಕೆ ಹೊಂದದ, ಸಂಸ್ಕೃತಪದವನ್ನು ಕನ್ನಡಕ್ಕೆ ಹೊಂದಿಸುವುದು( ತದ್ಭವ ಮಾಡಿ ). ಈ ಕ್ರಿಯೆಯಿಂದ ಪದಗಳು ಸುಲಭವಾಗಿ ಉಲಿಯಲು ಆಗಬೇಕು.
ಮಾದರಿ:
ವ್ಯವಸಾಯ => ಬೇಸಾಯ
ಮಹಾದೇವ => ಮಾದೇವ
ಶ್ರೀ => ಸಿರಿ
ಭೇದ => ಬೇದ,
ಅಸಹ್ಯ => ಅಸಯ್ಯ,
ಉತ್ಸವ => ಉತುಸವ / ಉಸ್ಸವ
ಪ್ರಾತಃಕಾಲ => ಪಾತಕಾಲ
ಶಾಲೆ => ಸಾಲೆ
ಆರಕ್ಷಕ = >ಆರಕುಸಕ / ಆರಕ್ಕಕ
ಸಂವಿಧಾನ => ಸಂವಿದಾನ / ಸಂಬಿದಾನ
ಸದಸ್ಯ => ಸದಸಿಯ / ಸದಯ್ಯ / ಸದಸ್ಸ
ಸ್ವಲ್ಪ => ಸೊಲುಪ / ಸೊಲ್ಪ
ಮುಖ್ಯ => ಮುಕಿಯ / ಮುಕ್ಯ
ಮಂತ್ರಿ => ಮಂತಿರಿ / ಮಂತ್ತಿ
ಅನ್ಯ => ಅನಿಯ
೫. ಉಲಿಯಲು ತೊಡಕಾದ ಸಂಸ್ಕೃತದ ಪದಗಳ ಬದಲು, ಬೇರೆ ನುಡಿಯಿಂದ ಪದಗಳನ್ನು ಬಳಸುವುದು
ಮಾದರಿ:
ವಿಪರ್ಯಯ = ಬದಲು, ಚೇಂಜು
ಪೀಠ = ಕುರ್ಚಿ, ಚೇರು
ಕೃತಕ = ನಕಲಿ, ಗಿಲೀಟು,
ಅಭ್ಯಾಸ = ಅಲುವಾಟು
೪. ಇವಲ್ಲದೆ,
ಮೂಲ ಹಳೆಗನ್ನಡದಲ್ಲಿ ಹ ಇರಲಿಲ್ಲ. ಅದರ ಜಾಗದಲ್ಲಿ ’ಪ’ ಇತ್ತು. ಕನ್ನಡದಲ್ಲಿ ’ಹ’ ಕ್ಕೆ ವಿಶೇಷ ಸ್ಥಾನವಿರಲ್ಲ. ಬಹಳ ಮಂದಿ ’ಹಾಕಳು/ಆಕಳು’, ’ಹಮ್ಮ/ಅಮ್ಮ’, ’ಹತ್ತಿಗೆ/ಅತ್ತಿಗೆ’ ಎಂದು ಉಲಿದು, ’ಹ’ಕಾರಕ್ಕೂ ಸ್ವರಗಳಿಗೂ ವ್ಯತ್ಯಾಸ ತೋರಿಸಲ್ಲ. ಕಾರಣ ಅವರ ದಿಟವಾದ ನುಡಿಯಲ್ಲಿ “ಹ” ಇಲ್ಲ.
’ಹ’ಕಾರ ಹೇಳಲು ಕಷ್ಟವಾದವರು “ಹಲ್ಲಿ”ಅನ್ನು”ಪಲ್ಲಿ”, “ಹೂವು”ಅನ್ನು “ಪೂವು”, “ಹೆಣ್ಣು”ಅನ್ನು”ಪೆಣ್ಣು” ಎಂದು ಹಿಂದೆ ಇದ್ದಂತೆ ಹೇಳಲು ತೊಡಗಬಹುದು, ಎಂಬುದು ನಮ್ಮ ಅನಿಸಿಕೆ.
ಗಮನಿಸಿ: ಶಬ್ದಮಣಿದರ್ಪಣ, ಕವಿರಾಜಮಾರ್ಗಗಳಂತೆ “ಮನಗೆ ಹೋಗು” => “ಮನೆಗೆ ವೋಗು”, “ಮಳಹಳ್ಳಿ” => “ಮಳವಳ್ಳಿ”, “ಮುಂದು ಹರಿ” => “ಮುಂದುವರಿ” ಇವೆಲ್ಲ ಸರಿಯಾದ ಪ್ರಯೋಗಗಳು, ದೋಷಗಳಲ್ಲ. ಅವರೂ ಕೂಡ ಕನ್ನಡಿಗರ ಈ ಸಹಜತೆಯನ್ನು ಗುರುತಿಸಿದ್ದಾರೆ.
ನೇರವಾಗಿ ಸಂಸ್ಕೃತದ ಪದಗಳನ್ನು ಬಳಸಿಕೊಂಡು ಮುಂದುವರಿದರೆ ಕನ್ನಡಕ್ಕೆ ಏನು ಕುತ್ತು?
೧.ಸಂಸ್ಕೃತ ಬೆರೆತ ಕನ್ನಡವನ್ನು ಮಾತಾಡುವುದೇ ದೊಡ್ಡ ತ್ರಾಸವಾಗಿ, ಜನರು ಬೇರೆ ಭಾಷೆಯ ಕಡೆಗೆ ಹೆಚ್ಚು ಓಲವು ತೋರುವರು.
೨.ಕನ್ನಡದ ಹೊತ್ತಗೆಗಳನ್ನು, ಸುದ್ದಿ ಪೇಪರ್‍ಗಳನ್ನು ಓದುವವರು ಕಡಮೆಯಾಗುವರು.
೩.ಇವುಗಳ ಪರಿಣಾಮ, ಕನ್ನಡದಲ್ಲಿ ಬರೆಯುವ ಹೊಸಬರು ಕಡಮೆಯಾಗುವರು.
೪.ಹಳ್ಳಿಯಲ್ಲಿ ಓದುವ ಜನರು ಎರಡೆರಡು ಕನ್ನಡವನ್ನು ಕಲಿಯಬೇಕಾಗುವುದು. ಅ) ತಾವಾಡುವ ಆಡು ನುಡಿ. ಆ) ಆಡು ನುಡಿಗೆ ಬಹಳ ಕಡಮೆ ಹೋಲಿಕೆ ತೋರುವ ಬರಹದ ಭಾಷೆ.
೫.ಕನ್ನಡ ಮಾತಾಡುವಾತ, ಚೆನ್ನಾಗಿ ಕನ್ನಡವನ್ನು ಬರೆಯಲಾರ, ಹಾಗು ಕನ್ನಡ ಬರಹಗಳನ್ನು ಓದಲಾರ. ಕಾರಣ ಅವನು ಆಡುವ ಕನ್ನಡಕ್ಕೂ, ಬರೆವಣಿಗೆಯಲ್ಲಿರುವ ಕನ್ನಡಕ್ಕೂ ವ್ಯತ್ಯಾಸ ತುಂಬಾ ಜಾಸ್ತಿ.
೬.ಹೊಸಪದಗಳಿಗೆ ಸಂಸ್ಕೃತದ ಕಡೆ ನೋಡುವುದರಿಂದ, ಕನ್ನಡದಲ್ಲೇ ಪದಗಳನ್ನು ಹುಟ್ಟಿಸುವ, ಕಟ್ಟುವ, ಜಾಣತನ ಜನರಲ್ಲಿ ಇಲ್ಲದೇ ಹೋಗುವುದು. ಆ ಜಾಣತನದ ಕೊರತೆಯಿಂದ ಮುಂದೆ ಬರುವ ಎಲ್ಲ ಹೊಸ ಹೊಸ ಸಂಗತಿಗಳಿಗೆ ಪದಗಳಿಗಾಗಿ ಸಂಸ್ಕೃತ ಇಲ್ಲವೇ ಬೇರೆ ನುಡಿಯನ್ನೇ ಅವಲಂಬಿಸಬೇಕಾಗುತ್ತದೆ. ಇದರಿಂದ ಕನ್ನಡದ ಸ್ವಂತಿಕೆಗೆ, ಬೆಳವಣಿಗೆಗೆ ಹಾನಿ.
==================================================================================
ಇದು ನಾನು ಓದಿದ ಹಲವು ಹೊತ್ತಗೆಗಳು(ಡಾ||D.N.ಶಂಕರ ಭಟ್ಟರ…), ಬರಹಗಳು, ನನ್ನ ಉಂಕು ಮತ್ತು ಹಲವು ಮಂದಿಯೊಡ ಮಾತಾಡಿ ಕಲೆಹಾಕಿದ ಒಂದು ಅರಿಮೆಗುಪ್ಪೆ.