ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ
ಚಂದಿರನ ತೂಕಕೆ ಇಡು ಸಂಜೆಯನು ಸೇಲಿಗೆ ಬಿಡು
ಬೂಮಿನ ಬಾಡಿಗೆ ಕೊಡು ಸಾಕು
ಲೋಕವ ಮೂಟೆ ಕಟ್ಟು ಬಾರಲೇ ಸಯ್ಕಲ್ ಹತ್ತು
ಲೋಕವ ಮೂಟೆ ಕಟ್ಟು ಬಾರಲೇ ಸಯ್ಕಲ್ ಹತ್ತು
ಯಾತಕೆ ದೂಸರಾ ಮಾತು? ಎಲ್ಲಾ ಟಯ್ಮ್ ವೇಸ್ಟು
ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ
ನೋಡು ಮುಂಗಾರು ಮಳೆ ಅದರೊಳಗೆ ಹೇಳವ್ರೆ
ಈ ಪ್ರೀತಿ ಎಂದೂ ಅತಿ ಮದುರ ತ್ಯಾಗ ಅಮರ
ಬೇಡುವೆನು ಓ ಚಿನ್ನ ಮಾಡಿ ಬಿಡು ತ್ಯಾಗಾನ
ನಿಂತು ಬಿಡು ಜೋಗದ ಗುಂಡೀಲಿ ಬಿಟ್ಟು ಬಿಡು ಈ ನನ್ನ
ಹಳೆ ಹುಡುಗಿ ಹೆಸರೇ ತೆಗೆಯದಲೇ ನಿನ್ನ ಮುಂದೆ ಸಾಚಾ ಆಗಿರುವೆ
ದಿನ ರಾತ್ರಿ ನಿನ್ನ ಮನೆಗೆ ಬರುವೆನು ನಾ ಕೊನೆಯವರೆಗೂ
ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ
-
ಇತ್ತೀಚೆಗೆ ನಮ್ಮ ಕನ್ನಡ ನಾಡಿನ ಹಿರಿಯ ಸಿನಿಮಾಡಿಗ(Cinema Actor) ರಾಜೇಶ್ ರವರು ಈ ಹಾಡಿನ ಬಗ್ಗೆ ಹರಿಹಾಯ್ದುದರ ಬಗ್ಗೆ ತುಸು ಮಾತುಕತೆಯಿದು. ಈ ಹಾಡು ತುಂಬ ಕೆಳಮಟ್ಟದ್ದು, ಹಾಗೆ, ಹೀಗೆ ಅಂತ ನನ್ನ ಗೆಳೆಯ ನನಗೆ ಮಿಂಮಾತುನಲ್ಲಿ(chat) ಹೇಳುತ್ತಿದ್ದ. ಅದಕ್ಕೆ ಅವನು ಪುರಾವೆಯಾಗಿ ಈ ತಮಿಳು-ಹಣೆನಾಮವನ್ನು ಏರಿಸಿಕೊಂಡಿದ್ದ ರಾಜೇಶ್ ರವರ ಹೇಳಿಕೆಯ ಕೊಂಡಿಯನ್ನು ಕೊಟ್ಟ . ಏನೋ ಅವನಿಗೆ ಬರೆವಣಿಗೆಗೆ ಒಂದು ಮೇಲ್ಮಟ್ಟ ಎಂಬುದಿದೆ. ಮೇಲ್ಮಟ್ಟದ ಬರಹವೆಂದರೆ ಉವೋ ’ಇಂತಿಪ್ಪ’ ಎಂಬ ಪದಗಳನ್ನೇ ಬಳಸೀ ಬಳಸೀ, ಬರೆದ ಬರಹಗಳು, ಕವನಗಳು ಎಂಬ ಮರುಳು. ಅದಕ್ಕೆ ನಾನು “ನೋಡಪ್ಪ, ಇದು ಮನತಣಿಸುವ ಕೆಲಸ. ಇದರಲ್ಲಿ ತುಂಬ ಮಡಿವಂತಿಕೆ ಮತ್ತು, ಅಂತೇ ಹೇಳುವ ‘ಸಬ್ಯತನ’ವನ್ನು ಹೇರಬಾರದು. ಸಿನಿಮ ಒಂದು ಹೊಸತನವನ್ನು ಹುಡುಕುವ(experimental innovation) ನೆಗಳು(ರಚನೆ). ಅದರಲ್ಲೂ ಈ ಹಾಡು ಯಾವ ಎಲ್ಲೆಯನ್ನೂ ಮೀರಿ ಕೆಟ್ಟಿಲ್ಲ. ಇದರಲ್ಲಿ ಒಬ್ಬ ಹಳೆ ಪಾತ್ರೆ,ಕಬ್ಬಿಣ ಮತ್ತು ಕಾಚಗದವನೂ ಕೂಡ ‘ಒಹ್, ನನ್ನ ಕೆಲಸಕ್ಕೆ ನಂಟಿರುವುದು ಈ ಹಾಡಿನಲ್ಲಿ ಎನೋ ಇದೆ’ ಅಂತ ಆತನ ಗಮನವನ್ನು ಸೆಳೆಯುವಂತಹ ಪದಗಳು ಅದರಲ್ಲಿವೆ. ಮತ್ತು ಒಬ್ಬ ಮಾಮೂಲಿ ಮಂದಿಯೂ ಕೂಡ ತನ್ನ ಬದುಕಿಗೆ ನಂಟಿರುವ ಸಂಗತಿಗಳನ್ನು ಈ ಹಾಡಿನಲ್ಲಿ ಪಡೆಯುಬೋದು. ನಂಟಿಲ್ಲದವರು ಈ ಹಾಡನ್ನು ಕೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳಬೋದು. ಬರಹವೆಂಬುದು ಕೇಳುವ ಮಾತನ್ನು ನೋಡವ ಬರವಣಿಗೆಗೆ ತರುವುದಶ್ಟೇ ಹೊರತು, ಅದರಲ್ಲಿ ಯಾವ ಮಡಿ ಮಯ್ಲಿಗೆಯಿಲ್ಲ. ಅವರವರ ಮನದಂತೆ ಅವರಿಗೆ ಬೇಕಾದಂತೆ ಬರಹಗಳನ್ನು ನೆಗಳಿಕೊಳ್ಳಲು ಯಾವ ಅಡ್ಡಿಯೂ ಇರಬಾರದು.” ಎಂದು ಹೀಗೆ ಬಿಡಿಸಿದೆ. ಅವನು ತಬ್ಬಿಬ್ಬಾದ. ಅವನು ತನ್ನ ಕಿರಿದಾದ ಮನದ ಹರವಿನ ಬಗ್ಗೆ ತುಸು ಊಂಕಿಕೊಳ್ಳಬೇಕು.
-
ಅವನನ್ನು ಇನ್ನು ಸಿಕ್ಕಿಸಲು ‘ ಅವನಿಗೆ ಹಾಡಿನ ಪದಗಳನ್ನು ತೋರಿಸಿ, ಹೇಳು ಯಾವುದು ಕೆಟ್ಟ ಪದ’ ಎಂದು ತುಸು ಗಟ್ಟಿಯಾದೆ. ಅದಕ್ಕೆ ಆತನು ಮಾತಿನ ವರಸೆಯನ್ನು ತಿರುಗಿಸಿ “ನಾನು ಕೆಟ್ಟ ಪದಗಳಿವೆ ಅಂತ ಹೇಳಲಿಲ್ಲ, ಒಳ್ಳೇ ಟೇಸ್ಟ್ ಇಲ್ಲ ಅಂತ ಹೇಳಿದೆ” ಅಂತ ಹೇಳಿದ. “ಏನಪ್ಪ ಟೇಸ್ಟು ಎಂಬುದು ಅವರವರ ಒಳಮೆ ಅಲ್ಲವೇ. ನಿನ್ನ ಟೇಸ್ಟೇ ಸರಿಯಿಲ್ಲ ಎಂದರೆ ಏನು ಮಾಡುವೆ” ಎಂದುದಕ್ಕೆ ಮುನಿಸಿಕೊಂಡು ಮಾತು ಮುರಿದು ಹೋದ.
-
ಉಶ್ಟೇ ಬರಹಗಳನ್ನು ಬರೆದರೂ, ಉಸಿರಾಡುತ್ತಿರುವ, ಲವಲವಕೆಯ ಆಡುಗನ್ನಡವೇ ದಿಟವಾದ ಕನ್ನಡ. ಕನ್ನಡ ನಾಡಿಗರು ಊಂಕುವುದು(ಯೋಚಿಸುವುದು), ತಮ್ಮ ನಾಳುನಾಳಿನ(ದೈನಂದಿನದ) ಬರಹಗನ್ನಡದಲ್ಲಲ್ಲ. ಅವರ ಬದುಕು ಸರೆಯೋದು ಆಡುಗನ್ನಡದ ಸೊಬಗಿನಲ್ಲೇ, ಹೊರತು ಬರಹಗನ್ನಡದ ಇಕ್ಕಟ್ಟಿನಲ್ಲಲ್ಲ. ಬರಹವೆಂದು ಹೇಳಿ, ಹೊರನುಡಿಯ ಹೇರಳ ಪದಗಳನ್ನು ತುಂಬಿದ, ಯಾರು ಮಾತಾಡದ ಕನ್ನಡದಿಂದ, ಹೆಚ್ಚುಹಲ ಮಂದಿಗೆ ಕನ್ನಡ ಬರವಣಿಗೆ ಸರಿಯಾಗಿ ತಲುಪದೇ, ಕನ್ನಡದ ಬರವಣಿಗೆ ಬರೀ ಕೆಲವರ ಹಿಡತದಲ್ಲೇ ಸಿಕ್ಕಿ ಒದ್ದಾಡುತ್ತಿರುತ್ತದೆ.ಹೆಚ್ಚು ಮಂದಿಯ ಕನ್ನಡ, ಬರಹಕನ್ನಡವಲ್ಲವೇ ಅಲ್ಲ. ಆ ಆಡುಕನ್ನಡದ ಸೊಲ್ಲರಿಮೆ(grammar), ಪದ ಬಳಕೆಗಳೇ ಬೇರೆ, ಅದರ ಸೊಗಡು, ಸೊಗಸೇ ಬೇರೆ. ಅದನ್ನು ನಾವು ಗುರುತಿಸಿ ಹುರಿದುಂಬಿಸಲೇ ಬೇಕು
ನನಗೆ ಈ ಹಾಡು ಮತ್ತು ಅದಕ್ಕೆ ಹೊಂದಿಸಿರುವ ಇನಿಪು(Music) ತುಂಬ ಹಿಡಿಸಿತು. ಏಡಿಗೆ(year) ಒಂದು ಕನ್ನಡ ಸಿನಿಮಾ ನೋಡದೆ ಇರುವವರು ಈ ಹಾಡಿನ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಅಂತ ನಿಕ್ಕುವ(sure) ಆಯಿತು. ಯಾರಾರ ಹೆಂಗಾರ ಅನ್ನಲಿ, ‘ಜಂಗ್ಲಿ’ ಸಿನಿಮಮನೆಗಳಲ್ಲಿ ಇನ್ನೂ ಓಡುತ್ತಿರುವುದು ಸಂತಸದ ಸುದ್ದಿ.
-
ಅದು ಹಾಗಿರಲಿ, ಈ ತೆರನಾದ ಹಾಡುಗಳು ಯಾಕೆ ಮಂದಿ ಮನಸ್ಸಿನಲ್ಲಿ ಉಳಿಯುತ್ತವೆ ಎಂದು ನೋಡುಮ(ನೋಡೋಣ).
-
ಕವಿರಾಜಮಾರ್ಗದಲ್ಲಿ ಹೀಗೆ ಹೇಳಲಾಗಿದೆ.
-
ನುಡಿಗೆಲ್ಲಂ ಸಲ್ಲದ ಕನ್ನಡದೊಳ್
ಚತ್ತಾಣಮುಂ ಬೆದಂಡೆಯುಮೆಂದು
ಈಗಡಿನ ನೆಗೞ್ತೆಯ ಕಬ್ಬದೊಳ್
ಒಡಂಬಡಂ ಮಾಡಿದರ್ ಪುರಾತನ ಕವಿಗಳ್”
-
(ಕವಿರಾಜಮಾರ್ಗ – 1-32)
-
ಅಂದರೆ ಕನ್ನಡ ನಾಡಿನಲ್ಲಿ ಹಳೆಯ(ಪುರಾತನ) ಹೊತ್ತಿನಿಂದಲೂ ಹಾಡುಗಬ್ಬ(ಶ್ರಾವ್ಯಕಾವ್ಯ) ಮತ್ತು ನೋಡುಗಬ್ಬ(ದ್ರುಶ್ಯಕಾವ್ಯ) ವನ್ನು ಕನ್ನಡಕ್ಕೆ ಒಡಂಬಡಿಸಿದ್ದಾರೆ ನಮ್ಮ ಹಿರಿಹಿರಿಯರು. ಚಿತ್ತಾಣ ಮತ್ತು ಬೆದಂಡೆ ಎಂಬ ಹೆಸರಿನ ಈ ಬಗೆಯ ನಾಡಗಬ್ಬಗಳಿದ್ದವು. ಆ ಕನ್ನಡನುಡಿಗಬ್ಬಗಳನ್ನು ಕಟ್ಟಿದವರು ಇಂತವರೇ ಎಂದು ಹೇಳಲಾಗದು. ಅದಕ್ಕೆ ಕವಿರಾಜಮಾರ್ಗಗಾರನು ಕೂಡ ಹಿರಿಯ ಕಬ್ಬಿಗರ್ ಎಂದೇ ಹೇಳುತ್ತಾನೆ. ಅಂದರೆ ಇದು ನಮ್ಮ (ಕನ್ನಡಿಗರ) ಮನದಾಳಕ್ಕೆ ಈ ಹಿರಿಯ ಕಬ್ಬಿಗರ್ ಕಟ್ಟಿದ ಹಾಡುಗಳ ದಾಟಿಯಲ್ಲಿ, ಅಂದರೆ ಆಡುಮಾತಿನ ದಾಟಿಯಲ್ಲಿರುವ ಹಾಡುಗಳು ತಟ್ಟುತ್ತವೆ ಎಂದಾಯಿತು. ಅಂದರೆ ನಾವು ಯಾವುದೋ ಬೇರೆ ನಡಾವಳಿ(ಸಂಸ್ಕ್ರುತಿ)ಗೆ ಬಗ್ಗದೆ ನಮ್ಮ ತನವನ್ನು ತೋರುವ ಹಾಡುಗಳನ್ನು ಕಟ್ಟುವ ಕೆಲಸವನ್ನು ನಿಲ್ಲಿಸಬಾರದು, ನಿಲ್ಲಿಸಿದರೆ ಅದು ನಮ್ಮ ಕನ್ನಡ ಬುಡಕಟ್ಟಿನ(ಜನಾಂಗದ) ಒಂದು ಬಲು ತಲೆಮೆಯ(ಮುಕ್ಯವಾದ) ನಡಾವಳಿ(ಸಂಸ್ಕ್ರುತಿ)ಯನ್ನು ಕಳೆದುಕೊಂಡಂತೆ.
- ಬರತ ಕುಮಾರ
![ಜಂಗ್ಲಿ[nowrunning.com]](http://nowrunning.com/content/movie/2009/Junglee/stills/Junglee8.jpg)
