ಬರಹ.ಕಾಂನ ನಿಮ್ಮದೇ ಪದನೆರಿಕೆ
“ಬರಹ.ಕಾಂ” ಎಂಬ ಮಿಂಬಲೆನೆಲೆಯಲ್ಲೊಂದು “ನಿಮ್ಮದೇ ನಿಘಂಟು” ಎಂಬ ಪದನೆರಿಕೆಯಿದೆ. ಬರಹ.ಕಾಂ ಹಲವು ಪದನೆರಿಕೆಗಳನ್ನು ಹುಡುಕುವ ಸುಳುವು ನೀಡುತ್ತೆ.
ಅಲ್ಲಿ ನಿಮಗೆ ತಿಳಿದಿರುವ ಹಾಗು ಮಿಂಬಲೆಯಲ್ಲಿಹ ಕನ್ನಡ-ಪದನೆರಿಕೆಗಳಲ್ಲಿ ಹುಡುಕಿ-ದೊರೆಯದ ಪದಗಳನ್ನು ಸೇರಿಸಬೋದು.
ಈಗಾಗಲೇ ತಕ್ಕಶ್ಟು ಪದಗಳಲ್ಲಿವೆ. ಅದರ ಬಳಕೆಯ ಕೂಟೇ, ಅದರ ಬೆಳೆತಕ್ಕೆ ನೆರವಾಗಬೋದು.
ಕನ್ನಡದ ಒಳಗುಟ್ಟು ೫ – ಹೋಗೋ, ಹೋಗೇ, ಹೋಗು
ಬಲು ನಾಳುಗಳ ಬಳಿಕ ಮತ್ತೊಂದು ಬರಹ.
ಕನ್ನಡದಲ್ಲಿ ಅಣತಿಯೆಸಗುಪದಗಳ/command verb forms ರೂಪಗಳೂ ಕೂಡ ಲಿಂಗಗಳಿಗೆ ತಕ್ಕಂತೆ ಮಾರ್ಪಡುತ್ತವೆ.
ಮಾದರಿಗೆ
ಹೋಗೋ – ಒಬ್ಬ ಗಂಡು-ಮನುಶ್ಯನಿಗೆ ಹೇಳಿದ ಅಣತಿ
ಹೋಗೇ – ಒಬ್ಬಳು ಹೆಣ್ಣು-ಮನುಶ್ಯನಿಗೆ ಹೇಳಿದ ಅಣತಿ
ಹೋಗು – ಒಂದು/ಒಬ್ಬ ಹೇಳಿದ ಅಣತಿ
ಹೋಗೀ/ಹೋಗಿರಿ – ಹಲವಚನದಲ್ಲಿ ಹೇಳಿ ಅಣತಿ
ಈ ಬಗೆಯ ಎಸಗುಪದದ ರೂಪಗಳ ಕನ್ನಡದಲ್ಲಿದೆ ಹೊರತು ಸಂಸ್ಕೃತ, ಹಿಂದಿ, ಇಂಗ್ಲೀಶಲ್ಲಿ ಇಲ್ಲ. ತೆಲುಗು, ತಮಿಳಲ್ಲೂ ಇದೆ.
ಕನ್ನಡದ ಒಳಗುಟ್ಟು ೪ : ತಿಂದೂ ತಿಂದೂ
ಮಾದರಿ ಸಾಲುಗಳು
೧) “ತಿಂದೂ ತಿಂದೂ ಹೊಟ್ಟೆ ಉಬ್ಬರಿಸಿಕೊಳ್ತು”
೨) “ಹೋಗೀ ಹೋಗೀ ಅವನನ್ನ ಕೆಣಕೋದು!”
೩) “ನೋಡೀ ನೋಡೀ ಸಾಕಾಯ್ತು”
೪) “ಅತ್ತೂ ಅತ್ತೂ ಸುಸ್ತಾದ್ಲು”
ಇಂಗ್ಲಿಶಲ್ಲಿ ಹೇಳಕ್ಕೆ ನೋಡುಮ.
1) The stomach got upset because he has eaten too much
2) <ಇದಕ್ಕೆ ನನಗೆ ಇಂಗ್ಲಿಶ್ ಸಾಲು ಹೊಳೀತಿಲ್ಲ>
3) <ಇದಕ್ಕೂ ಇಲ್ಲ>
4) She is tired because she has wept a lot
ಗಮನ
ತಿಂದೂ ತಿಂದೂ = ತುಂಬಾ ತಿಂದು
ಹೋಗೀ ಹೋಗೀ = ತುಂಬಾ ಹೋಗಿ
ನೋಡೀ ನೋಡೀ = ಹೆಚ್ಚು ನೋಡಿ
ಅತ್ತೂ ಅತ್ತೂ = ಸಿಕ್ಕಾಬಟ್ಟೆ ಅತ್ತು
ಅಂದ್ರೇನು.. ಒಂದು ಕೆಲಸವನ್ನು ತುಂಬಾ/ಹೆಚ್ಗೆ/ಸಿಕ್ಕಾಬಟ್ಟೆ ಮಾಡಿದ್ರೆ/ಮಾಡೋದಾದ್ರೆ ಅದರ ಕೆಲಸದ past participle ಅನ್ನು ಎರಡು ಸರತಿ ಹೇಳೋದು ಕನ್ನಡದ ವಿಶೇಶ.
ಕನ್ನಡದ ಒಳಗುಟ್ಟು ೩ : ತಿಂತಾ ತಿಂತಾ
ಮೊದಲಿಗೆ ಕೆಲ ಕನ್ನಡದ ಸೊಲ್ಲುಗಳನ್ನು ಗಮನಿಸುಮ.
೧) ತಿಂತಾ ತಿಂತಾ ಮಾತಾಡಬೇಡ.
೨) ಟೀವಿ ನೋಡ್ತಾ ನೋಡ್ತಾ ನಿದ್ದೆ-ಹೋದೆ.
೩) ನಗ್ತಾ ನಗ್ತಾ ಹಾಡ್ತಿದ್ಲು.
ಈಗ ಈ ಸೊಲ್ಲಗಳನ್ನು ಇಂಗ್ಲಿಶಲ್ಲಿ ಹೇಳಕ್ಕೆ ತಿಣುಕುಮ.
1) Don’t talk while eating.
2) I slept while watching the TV.
3) She was laughing while singing.( ಆದರೆ ಸರಿಯಾದ ಸಾಲು. She was singing while laughing )
ಈಗ ನೋಡಿದರೆ,
ತಿಂತಾ ತಿಂತಾ = while eating
ನೋಡ್ತಾ ನೋಡ್ತಾ = while watching/seeing/looking
ನಗ್ತಾ ನಗ್ತಾ = while laughing
ಅಂದರೆ ಒಂದು ಕೆಲಸ ಮಾಡ್ತಾ ಇನ್ನೊಂದು ಕೆಲಸ ಮಾಡ್ತಿದ್ರೆ/ಮಾಡಿದ್ರೆ ಹೀಗೆ ಬಳಕೆ.
ಕನ್ನಡದಲ್ಲಿ ನಾವು ‘while’ ಎಂದು ಒಂದು ಬೇರೆಪದ ಬಳಸದಿದ್ದರೂ ಆ ಅರ್ಥವನ್ನು ಹೀಗೆ ತೋರಿಸ್ತೀವಿ.
“ತಿನ್ನೋವಾಗ ಮಾತಾಡಬೇಡ”
“ಟೀವಿ ನೋಡೋವಾಗ ನಿದ್ದೆ-ಹೋದೆ”
“ಹಾಡೋವಾಗ ನಗ್ತಿದ್ಲು” / “ನಗೋವಾಗ ಹಾಡ್ತಿದ್ಲು” ಎಂದು ಕೆಲವು ಕಡೆ ಹೇಳಿದ್ರೂ, ಅದು ’ತಿಂತಾ ತಿಂತಾ’, ’ನೋಡ್ತಾ ನೋಡ್ತಾ’ ರೂಪಗಳ ಹಾಗೆ ಕನ್ನಡದ ವಿಶೇಶ ಬಳಕೆಗಳಲ್ಲ.
ಅವು ಮರಾಟಿ/ಹಿಂದಿ/ಉರ್ದು/ಕೊಂಕಣಿ ನುಡಿಗಳ ಪ್ರಭಾವವೆಂದು ನನ್ನ ಅನಿಸಿಕೆ. “ಖಾತೇ ವಕ್ತ್ ಬೋಲ್ನಾ ಮತ್”, “ಟೀವಿ ದೇಖ್ತೇ ಹುಯೇ ಸೋಗಯ”, “ಗಾತೇ ವಕ್ತ್ ಹಸ್ ರಹೀ ಥೀ”
ಇನ್ನು ಹಿಂದಿಯ “ಚಲ್ತೇ ಚಲ್ತೇ”, “ಗಾತೇ ಗಾತೇ” ಬಳಕೆಗಳ ಬಗ್ಗೆ ನನಗೆ ಅರಿವಿಲ್ಲ.
ಇಲ್ಲಿ ಗಮನಿಸಿರಿ, ಬರೀ “ತಿಂತಾ” ಪದಕ್ಕೂ, “ತಿಂತಾ ತಿಂತಾ” ಎಂದು ಎರಡು ಸಲ ಬರುವ ಬಳಕೆಗೂ ಅರ್ಥವ್ಯತ್ಯಾಸ/ಅರಿಮೆಬೇರೆತನವಿದೆ. “ತಿಂತಾ” ಎಂದರೆ ತಿನ್ನುವ ಕೆಲಸ ನಡೆಯುತ್ತಿದೆ ಎಂದಾದರೆ “ತಿಂತಾ ತಿಂತಾ” ಎಂದಾಗ ತಿನ್ನುವ ಕೆಲಸದ ಜತೆಗೆ ಮತ್ತೊಂದು ಕೆಲಸವೂ ಇದೆ ಎಂದು ತಿಳಿವು.
ಕನ್ನಡದ ಒಳಗುಟ್ಟು ೨ : ಅದಾ? ಇದಾ?
ಇನ್ನೊಂದು ಕನ್ನಡದ ಒಳಗುಟ್ಟು. ಹಿಂದೇ ನಾನು ’ಊ’ ಬಳಸಿ ಹೇಗೆ ನಾವು ’ಮತ್ತು’, ’ಹಾಗು’ ಎಂದು ಕನ್ನಡದಲ್ಲಿ ತೋರಿಸ್ತೀವಿ ಅಂತ ಗಮನಿಸಿದ್ದೆ.
ಈಗ ಹೇಗೆ ನಾವು ’ಮೇಣ್’/’ಅಥವಾ’/’ಇಲ್ವೇ’/’or’ ಎಂಬುದನ್ನು ಮೇಣ್/ಅಥವಾ/ಇಲ್ವೇ ಪದಗಳನ್ನು ಬಳಸದೇ ಪ್ರಶ್ನೆಗಳಲ್ಲಿ ಆ ಅರ್ಥವನ್ನು ಹೇಳ್ತೀವಿ ಎಂದು ಗಮನಿಸೋಣ.
ಮಾದರಿ ಸಾಲು: “ಅದಾ? ಇದಾ?”
ನಾವೆಲ್ಲರೂ ಈ ಪ್ರಶ್ನೆಯನ್ನು ಕೇಳಿದ್ದೀವಿ ಅಲ್ವ! ಈ ಪ್ರಶ್ನೆಯನ್ನ ಇಂಗ್ಲಿಶಲ್ಲಿ ಹೇಳಕ್ಕೆ ಪ್ರೈತ್ನ ಮಾಡಿದ್ರೆ “This or that?” ಎಂದು or ಬಳಸಿ ಹೇಳಲೇ ಬೇಕು. ಬರೀ “This? That?” ಅಂತ ಹೇಳಕ್ಕೆ ಬರಲ್ಲ.
“ಅದಾ?ಇದಾ?” ಅಂದ್ರೆ “ಅದಾ ಇಲ್ಲ ಇದಾ?” ಎಂದು.
ಹಾಗೇ ಈ ಸಾಲುಗಳನ್ನು ಗಮನಿಸಿರಿ
ಬಂದಿದ್ದು, ರಾಮನಾ, ಸೋಮನಾ? = ರಾಮ ಮತ್ತು ಸೋಮ ಇಬ್ಬರಲ್ಲಿ ಬಂದಿದ್ದು ಯಾರು? = Who has come, Rama or Soma?
ನಾಳೇನಾ, ನಾಳಿದ್ದಾ, ಮದುವೆ? = ಮದುವೆ ನಾಳೆಯೇ ಇಲ್ಲವೇ ನಾಳಿದ್ದೇ? = Is the wedding on tomorrow or the day after?
ಸಾರಾ, ಗೊಜ್ಜಾ, ಏನ್ ಬೇಕು? = ಸಾರು ಬೇಕೇ ಅಥವಾ ಗೊಜ್ಜು ಬೇಕೇ?
ಈಗ ಪ್ರಶ್ನೆಗಳಿಂದ ಹೇಳಿಕೆಗಳ ಕಡೆ ನೋಡೋಣ.
ರಾಮನೋ, ಸೋಮನೋ ಬಂದಿದ್ದು = ರಾಮ ಅಥವಾ ಸೋಮ ಬಂದಿದ್ದು.
ನಾಳೇನೋ, ನಾಳಿದ್ದೋ ಮದುವೆ. = ಮದುವೆ ನಾಳೆ ಅಥವಾ ನಾಡಿದ್ದು ಇರೋದು.
ಸಾರೋ, ಗೊಜ್ಜೋ, ಬೇಕು = ಸಾರೋ ಅಥವಾ ಗೊಜ್ಜು ಬೇಕು.
ಹೀಗೆ ಅಪ್ಪಣೆ ಸಾಲುಗಳೂ ಕೂಡ
ರಾಮನೋ, ಸೋಮನೋ ಹೋಗಿ, ನೀರ್ ತನ್ನಿ.
ಸಾರೋ, ಗೊಜ್ಜೋ ಹಾಕು.
ನಾಳೆಯೋ, ನಾಳಿದ್ದೋ ಹೋಗು.
ಆಡುಗನ್ನಡದಲ್ಲಿ ’ಅಥವಾ’, ’ಇಲ್ವಾ’, ’ಮೇಣ್’, ’or’ ಎಂದು ಹೇಳಲು ನಾವು ಒಂದು ಪದದ ಬದಲು ಹೀಗೆ ಹಿನ್ನೊಟ್ಟುಗಳನ್ನು(postfix) ಬಳಸ್ತೀವಿ.
ಕನ್ನಡದ ಒಳಗುಟ್ಟು ೧ – ಊ, ಮತ್ತು, ಹಾಗು
ನನಗೆ ಹೊಳೆದ ಕೆಲವು ಕನ್ನಡದ್ದೇ ಆದ, ಕನ್ನಡ ನುಡಿಯ ನಿಬ್ಬರದ ಸಂಗತಿಗಳನ್ನು ಬರೆಯುತ್ತಿದ್ದೀನಿ…
ಕನ್ನಡದ ಈ ಹಾಡನ್ನು ಗಮನಿಸೋಣ.
ಇಲ್ಲಿ ಮೊದಲ ಸಾಲನ್ನು ನಾವು ಆಡುನುಡಿಯಲ್ಲಿ ಹೇಳಿದ್ರೆ ಹೀಗೆ ಹೇಳ್ತೀವಿ “ಕಣ್ಣೂ ಕಣ್ಣೂ ಕಲೆತಾಗ” ಎಂದು. ಅಂದ್ರೇನು? ಒಂದು ಕಣ್ಣು ಮತ್ತು ಮತ್ತೊಂದು ಕಣ್ಣು ಕಲೆತಾಗ ಎಂದು. ಇಲ್ಲಿ ಗಮನಿಸಬೇಕಾದ ಸಂಗತಿ ಕಣ್ಣೂ ಕಣ್ಣೂ ಎಂದು ಬರುವ ಊ ಹಿನ್ನೊಟ್ಟು.
ಕನ್ನಡದಲ್ಲಿ And, ಮತ್ತು, ಹಾಗು ಎಂದು ತಿಳಿಸಲು ಈ ಹಿನ್ನೊಟ್ಟನ್ನೇ ನಾವು ಹೆಚ್ಚುಗೆ ಬಳಸೋದು. ಮತ್ತು, ಹಾಗು ಆಡುನುಡಿಯಲ್ಲಿ ಕಡಮೆ ಬಳಕೆಯಲ್ಲಿವೆ ಎಂದು ನನಗೆ ಅನ್ನಿಸ್ತದೆ.
“ನಾನೂ ಅಂಗಡಿಗೆ ಹೋಗಿ ಉಪ್ಪನ್ನೂ, ಸಕ್ರೇನೂ, ತರಕಾರೀನೂ ತಗೊಂಡ್ ಬಂದೆ”
“ಅವನು ರಮಾನ್ನೂ, ಸೀತಾನ್ನೂ, ಗೋಪೀನ್ನೂ ಕರೆಕೊಂಡು ಹೋದ”
“ಅಮ್ಮ ರೊಟ್ಟೀನೂ, ಚಟ್ನೀನೂ ಮಾಡಿದ್ಲು”
“ಅಮ್ಮನ್ನೂ, ಅಪ್ಪನ್ನೂ ಊಟಕ್ ಕರಿಯೋ”
ಇಲ್ಲಿ ಇನ್ನೊಂದು ಗಮನಿಸಬೇಕು. ಈ ’ಮತ್ತು’ ಎಂದು ತಿಳಿಸುವ ಸರಕುಗಳಿಗೆಲ್ಲ ಈ ’ಊ’ ಹಿನ್ನೊಟ್ಟು ಬರುವುದು.. ಅಂದ್ರೆ ಪಟ್ಟಿ ಮಾಡುವ ಅಶ್ಟೂ ಸರಕುಗಳಿಗೂ ಈ ಹಿನ್ನೊಟ್ಟು ಹಾಕುವುದು ಕನ್ನಡದ ಬಗೆ.
ಇದನ್ನು ಮಾತನಾಡುವಾಗ ಗಮನಿಸಿದರೆ..
’ನಾನೂ ನೀನೂ ಸಿನಿಮಕ್ಕೆ ಹೋಗೋಣ’ ಎಂಬ ಸಾಲನ್ನು ತೆಗೆದುಕೊಳ್ಳೋಣ.
’ನಾನೂ’ ಎಂದು ’ಊ’ ಎಂದು ಎಳೆದು ಹೇಳಿದಾಗ, ಕೇಳುಗನಿಗೆ ’ನಾನು’ ಎಂಬುದರ ಜತೆಗೆ ಮತ್ತೊಂದು ಸೇರಲಿಗೆ ಎಂಬ ಸುಳಿವು ಸಿಕ್ಕಿರುತ್ತದೆ.
ಹೀಗೊಂದು ಕನ್ನಡಕ್ಕೆ ಹೋರಾಟ
ಏನಾಯ್ತಪ್ಪ ಅಂದ್ರೆ ನೆಂನೆ ಶುಕ್ರುವಾರವಾದುದರಿಂದ ನಮ್ಮ ಮನೆಯಾಗೆ ಹೀಗೆ ಒಟ್ಟಿಗೆ ಊಟ ಕುಡಿತ ಹರಟೆಯ ಒಂದು ಇರುಳಾಯ್ತು… ನಮ್ಮ ಹಟ್ಟಿಯಾಗೆ ಆರುಮಂದಿ ಇದ್ದೀವಿ. ಅದ್ರಾಗೆ ಅಯ್ವರು ಕನ್ನಡರು, ಒಬ್ಬ ತೆಲುಗ. ಆ ಕನ್ನಡರಾಗೆ ಒಬ್ಬ ನಾನು ಮಂಡ್ಯದೋನು, ಒಬ್ಬ ಬಿಜಾಪುರದೋನು, ಇಬ್ರು ಬೆಳಗಾವೆಯೋರು, ಒಬ್ಬ ಹುಬ್ಬಳ್ಳಿಯಾಂವ.
ಹಿಂಗೆ ಸಂಜೆ ಚಲೂ ನಡೀತಿತಪ್ಪ… ಬೆಳಗಾವೆಯೋನು ಮಾಡಿದ ಬಿಸಿಬೇಳೆ ಬಾತ್ ತಿಂತಾ, ಮಂಡ್ಯೋದನು ಮತ್ತೆ ಬಿಜಾಪುರದೋನು ತಂದಿದ್ದ ಬೀರ್ ಹೀರ್‍ತಾ, ಇದಕ್ಕೆ ನಮ್ಮ ತೆಲುಗು ಬಾಬು ಮಾಡಿದ್ದ ಕೋಳಿ, ಜಗೀತಾ, ಆಹಾ ಸಗ್ಗ ನಮಗೆ ಅಗ್ಗ ಅಂತ ನಲೀತಿದ್ವು.. ಹರಟೆ ಮೇಲ್ ಹರಟೆ….
ಬೀರ್ ಬರಿದಾಯ್ತು.. ನಾವ್ ಅತ್ಲ ತಿಂದು ಮುಗಿಸಿ ಮಲಿಕ್ಕೊಳುಮ ಅಂತ ತಿನ್ನೋ ಕಡೀಕೆ ಗಮನ ಹರಿಸಿದ್ವು. ಆದ್ರೆ ನಮ್ ಬಿಜಾಪುರದ ಗಂಡಸಿಗೆ ಬೀರ್ ಸಾಲದೇ ಹೋಯ್ತು… ಅವನು ಸುಮ್ನೆ ಇದ್ದಿದ್ರೆ ಇದೆಲ್ಲ ನಡೀತಾನೇ ಇರಲಿಲ್ಲ. ಅವನು ನೇರ ಹೋಗಿ ನಮ್ ಕಪಾಟಲ್ಲಿ ತುರಿತಕ್ಕೆ ಎಂದಿಟ್ಟಿದ್ದ ರಮ್ ಬಾಟಲಿ ಹಿಡುದ್ ಬಂದೇ ಬಿಟ್ಟು. ನನಗೆ ಕೆಂಡದಂಗೆ ಸಿಟ್ ನೆತ್ತಿಗೇರಿ.. ’ಸಾಕ್ಲೇ.. ಅದನ್ನ ಅಲ್ಲೇ ಮಡ್ಗ್ ಬುಟ್ ಬಾ.. ಬಾತ್ ಉಣ್ಣು ಬಬಾ’ ಎಂದೆ. ಆಸಾಮಿ ಕೇಳ್‌ಬೇಕಲ್ಲ.. ತಂದು ಕ್ಲಾಸಿಗೆ ಸುರುದ್ಕೊಂಡು ಕೂತೇ ಕೂತ. ಇದರಿಂದ ನಮ್ ತೆಲುಗು ಬಾಬುಗೆ ಎಲ್ಲಿಂದ ಬಂತೋ ಹುರುಪು, ಅವನು ತಂಗೂ ಒಂದ ಗ್ಲಾಸ್ ಹಿಡಿದು ಹೊಯ್ಕೊಂಡೇ ಬಿಟ್ಟ. ನಾವ್ ಕಣ್ ಕಣ್ ಬಿಟ್ಕೊಂಡು ನೋಡ್ತಿದ್ವು. ನಂಗೆ ’ನೀನು ಒಂದ್ ರವುಂಡ್ ಹೊಡಿ’ ಅನ್ನೋದ ಮಡಿಯ. ನಾನೊಲ್ಲೆ ನಂಗೆ ನಾಳೆ ಆಪೀಸಯ್ತೆ ಎಂದು ಬಿಸಿಬೇಳೆ ಬಾತ್ ಮುಕ್ತಾ ಇದ್ದೆ…
ಇಬ್ರು ಕುಡಿದ್ರೂ ಕುಡಿದ್ರೂ ಕುಡಿದ್ರೂ.. ನಮಗೆ ಇವರಿಬ್ರ ಮಾತ್ ಕೇಳಕ್ ಸಕ್ಕತ್ ಅನ್ನಿಸ್ತು.. ನಾವೂ ಅಲ್ಲೇ ಕುಂತುಕೊಂಡ್ವು.. ಮಾತು ಯತಾ ಪರ್‍ಕಾರೇಣ ಸಿನಿಮ ಕಡೆ ಹೊರಳ್ತು.. ಈಟ್ ನಾಳು ಕನ್ನಡ ಸಿನಿಮ ಬಗ್ಗೆ ತುಟಿಕ್ ಪಿಟಿಕ್ ಅನ್ನದ ತೆಲುಗಯ್ಯ ಅದೇನಾಯ್ತೋ ’ನಿಮ್ ಕನ್ನಡ ಹೀರೋಗಳು ಬೇಶಿಲ್ಲ… ಅವರೋ ಅವರ ಮುಸುಡಿಗಳೋ… ನಮ್ ತೆಲುಗು ಆಳ್ಗಳ ನೋಡು, ಅವರ ತೋಳ್ ನೋಡು ಅಯ್ ಸ, ಅವರ ಬಯ್ಸೆಪ್ಸು ನೋಡು ಅಯ್ ಸ.. ಅದ್ಯಾಕೆ ಕನ್ನಡದಾಗೆ ಕುಳ್ಳಕ್ಕೆ, ಕೆಟ್ ಕೆಟ್ದಾಗಿರೋರೆಲ್ಲ ಹೀರೋಗಳು. ಆ ಗಣೇಶನೋಡು, ಆ ಉಪೇಂದ್ರನ್ ನೋಡು’ ಅಂತ ಅನ್ನೋದಾ.. ನಾವೆಲ್ಲ ಅವನನ್ನು ದುರದುರ ಅಂತ ನುಂಗೋ ಹಂಗೆ ನೋಡಿದ್ವು… ನಾನು ’ಏಲೇ ಆ ಮಾತ್ ಬುಡು.. ನಮ್ ರಾಜ್ಕುಮಾರು, ಇಶ್ಣುವರುದನು, ಅನಂತುನಾಗು, ಈಗೊಬ್ಬ ಕಿಟ್ಟಿ ಅನ್ನೋನು. ಏನ್ ಸಕ್ಕತ್ತಾಗವ್ರೆ.. ನೀನೊಬ್ಬ.. ಮಾತಾಡ್ ಬೇಡ ಅದರ ಬಗ್ಗೆ’ ಅಂದೆ. ಕೋತಿಮುಂಡೇದು ಇಶ್ಟಕ್ಕೆ ಸುಮ್ಕಿದ್ದಿದ್ರೆ ಎಲ್ಲ ಸರಿ ಇರ್‍ತಿತ್ತು.. ’ಏನ್ ನಿಮ್ ರಾಜಕುಮಾರು, ವಿಶ್ಣು… ನಮ್ ಚಿರಂಜೀವಿ ಸಮವ’ ಅನ್ನೋದ… ನಾನ್ ಸುಮ್ನಾಗಿ ಬುಟ್ಟೆ.. ಸುಮ್ಕೆ ಯಾಕೆ.. ಅಂತ.. ಆದ್ರೆ ನಮ್ ಬಿಜಾಪುರದ ಗಂಡಸಿಗೆ ಅದೆಲ್ಲಿಂದ ಅದಟು ಬಂತೋ.. ಜೋರಾಗಿ ’ಏನ್ಲೇ.. ನಿಂದು.. ನಿಮ್ ಚಿರಂಜೀವಿ.. ನಮ್ ಮುದೋಳದ ನಾಯಿಗಿಂತ ಹೊಲಸಾಗ್ ಹಾನ… ಮುಚ್ ಬಾಯ್.. ಅಸಜದಕಜಸದಹಬದಹಗ’ ಅಂದ..
ತೆಲುಗಯ್ಯ ಅಂದ್ರೆ ಏನು! ರಾಯಲು ಸೀಮೆಯ ಬಿಡ್ಡ! ಅವನು ’ಏಲೆ ಬಚಹಹಸದಜಹಸಗದಹಜ ಅಜಕಸದಕಜದಹಕಜಹ ಅಕಸದಹಕಹದ’
ನಮ್ ಬಿಜಾಪುರದ ಗಂಡಸು ’ಏನಲೇ ಅಲಸದಜಲಕಸ ಅಹಸಬದಬದಬಜಕಸದ ಅಕಸಜದಹಕಹ’
ನಾವು ” “
ಅವರಿಬ್ರು “ಅಜದಹಜಲ ಅಕಜದಹಕಜದಹ ಕಕಜದಹಜಕಸ ಅಕಜದಹಕಜದಹ ಮನಷ ಬಚಜ ಹಗದಬ ಹಗದ ಬಖಾಘ ಖಶಧಾ ಘಧಾ ಘಖ ಧಾಶಘ” ಅಂತೆಲ್ಲ ಕೊನೆಗೆ ಮಹಾಪ್ರಾಣದಾಗೆಲ್ಲ ಬಯ್ದಾಡಕ್ ಸುರು ಹಚ್ಚಿದ್ರು…
ಕೊನೆಗೆ ನಮ್ ಬಿಜಾಪುರ ಗಂಡಸು “ನಾವ್ ಕನ್ನಡಿಗ್ರು ಲೇ.. ನಮ್ ತಾವ್ ತಿರುಪೇ ಬರ್‍ತೀರಿ ನನ್ ಮಕ್ಳ” ಅಂತ ಅಂದು ತೆಲುಗಯ್ಯನ ಬನೀನ್ ಜಗ್ಗಿ ಹಿಡಿದು.. ಹೊಡೆಯಕ್ ಹೋದ.. ಅನ್ನೆಗಂ ಸಿರಿ ಕ್ರಿಶ್ಣ ಪರಮಾತುಮ ಸಂದಾನಕ್ ಹೋದಂಗೆ ನಾನ್ ನಡು ಹೋಗಿ.. “ಆಯ್ತು ಅಣ್ಣಂದಿರ.. ಈಗ ಅಮಿಕೊಂಡ್ ಮಲಿಕ್ಕೊಳ್ಳಿ.. ಇಲ್ದಿದ್ರೆ, ನಾವ್ ನಿಮ್ಮನ್ನ ಒದ್ದು ಹಟ್ಟಿಯಾಚೆ ಹಾಕ್ತೀವಿ..” ಎಂದು ಚಕ್ರ ಬಿಟ್ಟೆ. ಇಬ್ರು ಸುಮ್ಕಾದ್ರು.. ತೆಲುಗಯ್ಯ ಪಾಪಾ ಒಂಟಿ ಅನ್ಕೊಂಡು ರೂಮ್ಗೋದ. ನಾನ್ ಅವನ್ ಕೂಟೆ ಹೋಗಿ ಒಂದೆರಡು ಮಾತ್ನಾಡಿಸಿ ಬಂದ್ರೆ…….
ನಮ್ ಬಿಜಾಪುರದ ಗಂಡಸು ಏನ್ ಮಿಕ್ಕಿದ್ ಬಿಸಿಬೇಳೆ ಬಾತ್ ಮುಕ್ ಮುಗಿಸ್ತಾವ್ನೆ. ನನ್ ನೋಡಿ ’ಏನಲೇ.. ಕನ್ನಡಿಗ ಆಗಿ ನನ್ ಬೆನ್ನಿಗೆ ನಿಲ್ಲೋದ್ ಬಿಟ್.. ಅವನ್ ಜತೆ ಹೋಗ್ತೀಯ ಅಲಕಸಜದಕಲಜದ’ ಅಂದ.. ನಂಗ್ ಬಂತೂ ಸಿಟ್ಟು… “ಈಗ ಅಮಿಕೊಂಡ್ ಮಲಿಕೊದಿದ್ರೆ.. ನನ್ ತಾವ ರಾಗಿ ಬಡಿದಂಗೆ ಬಡಿಸ್ಕೋಬೇಕಾಗ್ತಯ್ತೆ… ಬಡ್ಡೇತದ್ದೆ.. ಉಂಡು ಮಲಿಕೊ ಓತಿಕ್ಯಾತ” ಅಂದೆ. ಅದ್ಯಾಕೋ ನಂಗೆ ಅವನಂಗೆ “ಅಸದಲಕಸಲಕ ಅಕದಸಹಕಹ” ಅಂತ ಬಯ್ಯಕ್ಕೇ ಬರಕ್ಕಿಲ್ಲ. ನನ್ ಜತೆ ಮಿಕ್ಕ ಹಟ್ಟಿಗರೂ ದನಿ ಸೇರಿಸಿ ನಮ್ ಬಿಜಾಪುರದ ಗಂಡಸನ್ನು ತಣ್ಣಗಾಗಿಸಿದ್ವು.
ಈ ಕನ್ನಡದೊಲುಮೆ, ಹೆಮ್ಮೆ, ನಾಡು ಬಿಟ್ಟು, ಪೆರನಾಡಿನಲ್ಲಿ, ಪೆರರೊಡ ಇರುವ ನಂಮಂತವರಿಗೆ ಹೇಗೆ ಹಿರಿದಾಗಿ ಕೆರಳಿ ಕೆಲವೊಮ್ಮೆ ಉಕ್ಕಿ ಚಿಮ್ಮುವುದು ಎಂಬದಕ್ಕೆ ಇದೊಂದು ಮಾದರಿ…
ಇಲ್ಲಿ ಗಮನಿಸಬೇಕಾದ ಸಂಗತಿ… ನಮಗೆ ನಮ್ಮದು ನಮ್ಮ ನುಡಿ ಎಂದು ಒಳಗಡೆ ಹೆಮ್ಮೆ, ಒಲುಮೆ ಇದ್ದೇ ಇರತ್ತೆ. ನಮ್ಮ ನುಡಿಗೆ ಆದ ಅವಮಾನ, ಮೋಸ, ಎಲ್ಲವನ್ನು ನಾನು ಮೇಲ್ನೋಟಕ್ಕೆ ಸಹಿಸಿಕೊಂಡಿದ್ದೀವಿ ಎಂದು ಅನ್ನಿಸಿದರೂ ನಮ್ಮ ಒಳಗೆ ಅದು ಕುದೀತಾನೇ ಇರ್‍ತದೆ. ಅದು ಹಿಂಗೆಲ್ಲ ಆಚೆ ಬರ್‍ತದೆ. ಅದರಲ್ಲೂ ನಮ್ ಬಿಜಾಪುರದ ಗಂಡಸು ಬರೀ ರಾಜ್ಕುಮಾರ್ ಹಾಡುಗಳನ್ನೇ ಹಾಕಿಕೊಂಡಿರೋದು ಯಾವಾಗಲೂ… ಅವನ ಕನ್ನಡದೊಲುವು ಕಂಡು ನನಗೆ ಮೊದಮೊದಲು ಸೋಜಿಗ. ಏನ್ ಉತ್ತರಕರ್ನಾಟಕದೋರಿಗೂ ಹಿಂಗೆ ಕನ್ನಡ ಕನ್ನಡ ಅಂತ ಮನಸ್ಸಿರುತ್ತಾ ಅಂತ… ಇದು ನನ್ ತಪ್ಪುಮನ ಬಿಡಿ .. ಆಮೇಲೆ ಉನ್ನಿಸಿದಾಗ ಗೊತ್ತಾಗಿದ್ದು ಇಲ್ಲದೇ ಇದ್ರೆ ಆ ಕಡೆಗೆ ನೆಟ್ಟಗೆ ನೀರುದಾರಿ, ಏನು ಮಾಡದೇ ಇದ್ರೂ ಕರ್ನಾಟಕದ ಜತೆ ಇರ್‍ತಿದ್ರ. ಕನ್ನಡವೇ ಅಲ್ಲವೇ ನಮ್ಮನ್ನೆ ಬೆಸೆಯೋ ಶಕ್ತಿ ಅಂತ. ಒಂದು ಇಂಡಿಯ ಆಗಿದ್ರೂ ’ಕರ್ನಾಟಕ ಏಕೀಕರಣ’ ಅಂತ ಕಾಸರಗೋಡಿಂದ ಅಕ್ಕಲಕೋಟೆ ತನಕ, ಆದೋನಿಯಿಂದ ಹಳಿಯಾಳದ ತನಕ ಚಳುವಳಿ ಮಾಡಿ ’ಕರ್ನಾಟಕ’ ಅಂತ ನೆಲ, ಮಂದಿ ಒಗ್ಗೂಡಿದ್ದು ಏತಕ್ಕಾಗಿ ಅಂದ್ರೆ ಕನ್ನಡಕ್ಕಾಗಿ, ಕನ್ನಡಿದಿಂದ ತಾನೇ!
ಕನ್ನಡದ ಉಲಿಗಳು
ಕನ್ನಡದ್ದೇ ಉಲಿಗಳು ಎಂಬುದರ ಬಗ್ಗೆ ಕೆಲವು ಮಾತುಕತೆ. ಇದು ಬರೆಗುರುತುಗಳ(ಲಿಪಿ) ಬಗ್ಗೆಯಲ್ಲ.ಊ ಬದುಕಿರೋ ನುಡಿಯೂ ಅದು ಬದುಕಿರೋದು ಎಂದರೆ ಅದನ್ನು ಮಂದಿ ಇನ್ನೂ ಉಲಿಯುತ್ತಿದ್ದಾರೆ. ಅದರಿಂದ ಒಬ್ಬರಿಗೊಬ್ಬರು ಅರಿಮೆಗಳನ್ನು(information) ಹಂಚಿಕೊಳ್ಳುತ್ತಿದ್ದಾರೆ. ಆ ನುಡಿಯಲ್ಲಿ ಮಾತಾಡುತ್ತಿದ್ದಾರೆ ಎಂದು. ನುಡಿಯ ಉಸಿರೇ ಅದರ ಉಲಿಗಳು, ಸದ್ದುಗಳು. ಒಂದು ನುಡಿಯ ಉಲಿಗಳ ಬಗ್ಗೆಯ ಆರಯ್ಯು(Research) ಮತ್ತು ಅರಿವುಗಳನ್ನು ಉಲಿಯರಿಮೆ(Phonology) ಎನ್ನುವರು.
ಎಲ್ಲ ನುಡಿಗಳಲ್ಲಿರುವ ಎಲ್ಲ ಉಲಿಗಳು ಬೇರೆ ಎಲ್ಲ ನುಡಿಗಳಲ್ಲಿ ಇರುವುದಿಲ್ಲ. ಒಂದು ನುಡಿಯಲ್ಲಿರಿವ ಉಲಿಗಳು ಮತ್ತೊಂದು ನುಡಿಯಲ್ಲಿ ಇರದೇ ಇರಬಹುದು. ಆದುದರಿಂದ ಅವುಗಳನ್ನು ಬೇರೆನುಡಿಗರು ಉಲಿಯಲಾರದೇ ಇರಬಹುದು. ಒಂದು ನುಡಿಯಲ್ಲಿರುವ ಪದಗಳನ್ನು ಅದನ್ನು ಮಾತಾಡದ, ತಮ್ಮ ಬುಡಕಟ್ಟಿನ, ತಾಯಿಮಾತು, ಮನೆಮಾತಲ್ಲದ ಮಂದಿಗೆ ದೊಡ್ಡ ತೊಡಕು. ಈ ತೊಡಕಿನಿಂದಲೇ ಬೇರೆಬೇರೆ ನುಡಿಯ ಮಂದಿ ತಮ್ಮದಲ್ಲದ ನುಡಿಗಳನ್ನು ಹಸನಾಗಿ ನೀಟಾಗಿ ಉಲಿಯಲಾರರು. ಹೀಗೆ ಮತ್ತೊಂದು ನುಡಿಯನ್ನು ಉಲಿಯುವಾಗ ಆಗುವ ಉಲಿತಪ್ಪುಗಳನ್ನು ತೀರಿಸಲು ಆಗೋದೇ ಇಲ್ಲ ಎಂದೇ ಹೇಳಬೇಕು. ಮಾದರಿಯಾಗಿ ಇಂಗ್ಲಿಶ್ ನುಡಿಯುವ ಹೆಚ್ಚು ಇಂಡಿಯಿಗರೆಲ್ಲ ಇಂಗ್ಲಿಶಿನ ಎರಡು ’ವ’, ಉಸಿರುಲಿ(Aspirated), ಪದದ ಕೊನೆಯ ’ಱ್’ ಮುಂತಾದ ತಮ್ಮ ನುಡಿಯಲ್ಲಿ, ಉಲಿಕೆಯಲ್ಲಿ ಇರದ ಉಲಿಯನ್ನು ಸರಿಯಾಗಿ ನುಡಿಯೋದೇ ಇಲ್ಲ. ಹಾಗೇ ಸಂಸ್ಕ್ರುತ, ಪ್ರಾಕ್ರುತದ(ಹಿಂದಿ ಮುಂತಾದವು) ನುಡಿಗರಿಗೆ ದ್ರಾವಿಡನುಡಿಗಳ ಉಲಿಗಳಾದ ’ಎ’, ’ಒ’, ’ಳ’, ’ೞ’, ’ಱ’ಗಳು ಉಲಿಯ ಬರುವುದಿಲ್ಲ. ಹೀಗೆ ಬೇರೊಂದು ನುಡಿಯ ಉಲಿಗಳನ್ನು ಉಲಿಯುವಲ್ಲಿ ಆಗುವ ತಪ್ಪುಗಳನ್ನು ಕೊರತೆಯಂದು ಎಣಿಸಲೇ ಬಾರದು. ಏಕೆಂದರೆ ಆ ಆ ನುಡಿಗರು ತಮ್ಮ ತಮ್ಮ ನುಡಿಯ ಉಲಿಕೆಯ ಉಲಿಗಳನ್ನು ಚನ್ನಾಗೇ ಉಲಿಯಬಲ್ಲರು. ಇದೇ ತೆರ ಹೆಚ್ಚು ಕನ್ನಡಿಗರಿಗೂ ತಮ್ಮ ಕನ್ನಡದ್ದ ಉಲಿಕೆಯಲ್ಲಿರದ ಉಲಿಗಳನ್ನು ಉಲಿಯುವಲ್ಲಿ ತೊಡಕು ಮತ್ತು ಉಲಿಯಲಾರದೇ ಇರುವುದು ಕೊರತೆಯಲ್ಲ.
ಆದುದರಿಂದ ಕನ್ನಡದ್ದೇ ಉಲಿಗಳು ಯಾವುವು ಎಂದು ತಿಳಿಯುವುದು ನಮ್ಮ ಕಲಿಕೆಗೆ ಬೇಕೇ ಬೇಕಾದುದು. ಆ ಕುರಿತು ನಮ್ಮ ಸೊಲ್ಲರಿಮೆಗಾರರು(Grammarians) ಮತ್ತು ಕಲಿಸಿಗರು(Teachers) ಹೆಚ್ಚು ಆರಯ್ಯುಗಳನ್ನಾಗಲಿ, ಇಲ್ಲಿಯ ವರೆಗೂ ಒತ್ತನ್ನಾಗಲಿ ಕೊಟ್ಟ ಹಾಗೆ ಕಾಣುತ್ತಿಲ್ಲ. ಇದರಿಂದ ಕನ್ನಡದ ಮಕ್ಕಳಿಗೆ ಬೇರೆ ನುಡಿಯ ತಮ್ಮ ಉಲಿಗಳಲ್ಲಿಲ್ಲದ ಪದಗಳನ್ನು ಉಲಿಯುವಲ್ಲಾಗುವ ತಪ್ಪುಗಳಿಂದ ಕೀಳರಿಮೆಪಟ್ಟುಕೊಳ್ಳುತ್ತಾರೆ. ಈ ಕೀಳರಿಮೆಗೆ ನಮ್ಮ ಕಲಿಸಿಗರೇ ಅರಯಮಿಕೆ(ಅಜ್ಞಾನ)ವೂ ದೊಡ್ಡ ಸಲುವು(ಕಾರಣ). ನಮ್ಮ ಕಲಿಸಿಗರಿಗೆ ನಮ್ಮ ಕನ್ನಡದ್ದೇ ಉಲಿಕೆಯ ಅರಿವಿಲ್ಲದಿರುವುದು ಮತ್ತು ಕನ್ನಡದ ಸೊಲ್ಲರಿಮೆಗಳು(Grammars), ಕನ್ನಡ ಸೇರದ ದ್ರಾವಿಡನುಡಿಗುಂಪಿಗಿಂತ ಬೇರೆಯೇ ಆದ ಸಂಸ್ಕ್ರುತದ ಸೊಲ್ಲರಿಮೆಯಂತೆ ಇರುವುದು, ದೊಡ್ಡ ಕನ್ನಡದ ಉಲಿಯ ದಿಟತನವನ್ನು ಅರಿಯುವಲ್ಲಿ ಕುತ್ತೇ ಆಗಿದೆ.
ಈ ನೆಲದಲ್ಲಿ ಒಟ್ಟು ನೂರೆರಡು/೧೦೨ ಉಲಿಗಳಿವೆ. ಆದರೆ ಅವಶ್ಟೂ ಒಂದೇ ನುಡಿಯಲ್ಲಿಲ್ಲ.
ಕನ್ನಡದ್ದೇ ಆದ ಪದಗಳನ್ನು ಗಮನಿಸಿದಾಗ, ಇಲ್ಲವೇ ಈ ಕುರಿತು ಆರಯ್ಯುಗಳನ್ನು ನಡೆಸಿರುವ ಶಂಕರಬಟ್ಟರು ಮುಂತಾದವರ ಹೊತ್ತಗೆಗಳನ್ನು ಓದಿದರೆ ಸಲೀಸಾಗಿ ನಮಗೆ ಕನ್ನಡದ್ದೇ ಉಲಿಗಳು ಅರಿವಾಗುವುವು.
ಕನ್ನಡದಲ್ಲಿ ಅಯ್ದು ಅ, ಇ, ಉ, ಎ, ಒ ತೆರೆಯುಲಿ(vowel)ಗಳು ಮತ್ತು ಗಿಡ್ಡತೆರಯುಲಿ(short vowel)ಗಳಿಗೆ ಸಮವಾಗಿ ಅಯ್ದು ಆ, ಈ, ಊ, ಏ, ಓ ಉದ್ದತೆರೆಯುಲಿ(long vowel)ಗಳಿವೆ. ಇವನ್ನು ಬಿಟ್ಟು ಬಡಗ ಕನ್ನಡ ಮತ್ತು ಬೇರೆ ಕನ್ನಡದ ಕವಲುಗಳಲ್ಲಿ ಕೆಲವು ಬಗೆಯ ’ಅ’ ಮತ್ತು ’ಎ’ಗಳಿವೆ. ಆದರೆ ಹೆಚ್ಚು ಕನ್ನಡಿಗರು ಅದನ್ನು ಬಳಸುವುದಿಲ್ಲ. ಆದುದರಿಂದ ಅವನ್ನು ಎಣಿಸಿಲ್ಲ.
ಇನ್ನು ಮುಚ್ಚುಲಿಗಳು(consonents) ಕ, ಗ, ಙ, ಚ, ಜ, ಞ, ಟ, ಡ ಣ, ತ, ದ, ನ, ಪ, ಬ, ಮ , ಯ, ರ, ಲ, ವ, ಶ, ಸ, ಹ, ಳ, ೞ, ಱ ಒಟ್ಟು ೨೩.
ಒಟ್ಟು ಕನ್ನಡದ್ದೇ ಉಲಿಗಳು ಮುವ್ವತ್ತೆರಡು/ಮೂವತ್ತೆರಡು/೩೨
ಅ ಆ ಇ ಈ ಉ ಊ ಎ ಏ ಒ ಓ
ಕ ಗ ಙ
ಚ ಜ ಞ
ಟ ಡ ಣ
ತ ದ ನ
ಪ ಬ ಮ
ಯ, ರ, ಲ, ವ, ಶ, ಸ, ಹ, ಳ, ೞ, ಱ [ ೞ, ಱ ಹಳಗನ್ನಡದ ಉಲಿಗಳು. ಇನ್ನು ಕನ್ನಡದ ಕೆಲವು ಕವಲುಗಳಲ್ಲಿ ಬಳಕೆಯಲ್ಲಿವೆ ]
-ಮಾಯ್ಸ
ನೆರವು :
ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು – ಡಾ. ಡಿ.ಎನ್.ಶಂಕರ ಬಟ್ಟ
ಕನ್ನಡ ಬರಹವನ್ನು ಸರಿಪಡಿಸೋಣ – ಡಾ. ಡಿ.ಎನ್.ಶಂಕರಬಟ್ಟ
ಹೊರನುಡಿಯ ಎಸಗೊರೆಗಳ(verbs) ಕಿರಿಕಿರಿ
ಬರೆಯೋವಾಗ ಆದಶ್ಟು ಕನ್ನಡದಲ್ಲಿ ಬರೀಬೇಕು ಅಂದುಕೋತೀನಿ. ಅದು ಕನ್ನಡದ ಮೇಲಿನ ಒಲವು ಅನ್ನೋದಕ್ಕಿಂತ ಬೇರೊಂದು ಸಂಗತಿಯಿಂದಾಗಿ.
ನಾನು ಓದುವಾಗ, ಹಲವು ಕನ್ನಡ ಬರಹದಲ್ಲಿ ಸಂಸ್ಕ್ರುತ ಒರೆಗಳು ಕಾಣಿಸಿಕೊಂಡು ಕಿರಿಕಿರಿಯಾಗುತ್ತವೆ. ಆಗ ಮನಸ್ಸಲ್ಲೇ ಅದನ್ನು ಕನ್ನಡಕ್ಕೆ ಮಾರ್‍ಪಡಿಸಿಕೊಂಡು ನೋಡಿದಾಗ – ಅಲ್ಲೆಲ್ಲಾ ಕನ್ನಡ ಒರೆಗಳಿದ್ದರೆ(words) ಸಾಲುಗಳು ಮತ್ತೂ ಗಟ್ಟಿಯಾಗುತ್ತಿತ್ತಲ್ಲ, ಹೆಚ್ಚು ತಟ್ಟುತ್ತಿತ್ತಲ್ಲ ಅನಿಸಿದ್ದಿದೆ. ಹಾಗೇಕೆ ಆಗುತ್ತದೆ ಎಂಬುದು ಹೊಸ ಸಂಗತಿಯೇನಲ್ಲ. ಬೇರೆ ನುಡಿಯ ಒರೆಗಳ ಬಗ್ಗೆ ಹಲವರು ಈಗಾಗಲೇ ಊಂಕಿದ್ದಾರೆ(think). ನನ್ನ ಇಂಗ್ಲಿಶ್ ಬರಹಗಾರ ಗೆಳೆಯನೊಬ್ಬ ಹೇಳಿದ ಈ ಬಗೆಯ ಮಾತು ನೆನಪಾಯಿತು.
ಇಂಗ್ಲಿಶಿನ suicide ಒರೆಯ ಬೇರು ಇಂಗ್ಲಿಶ್ ಆಗಿರದೆ – ಪ್ರೆಂಚು ನುಡಿಯದಾಗಿದೆ. ಇದು ಇಂಗ್ಲಿಶಿನಲ್ಲಿ ಎಸಗೊರೆಯಾಗಿ ಬಳಕೆಯಾದಾಗ commit ಅನ್ನುವ ಮತ್ತೊಂದು ಒರೆ ಬೇಕೇಬೇಕಾಗುತ್ತದೆ. ಅಶ್ಟರ ಮಟ್ಟಿಗೆ ಅದು ಬಲವಿಲ್ಲದ ಒರೆಯಾಗಿದೆ. ಬೇರೆ ನುಡಿಯ ಒರೆಯಾದ್ದರಿಂದ, ಆ ಒರೆಯ ಸೊಲ್ಲರಿಮೆಯ(ವ್ಯಾಕರಣದ) ಹಲವು ಮಾರ್‍ಪಾಡುಗಳನ್ನು ಅದು ಹೊರಲಾರದು. suicided, suiciding, suicides : ಇವು ಯಾವುದೂ ಬಳಸಲಾಗದ ಮಾರ್‍ಪಾಟುಗಳು. ಬರವಣಿಗೆ, ಮಾತು ಚುರುಕಾಗಲು ಅದು ತಡೆಯಾಗುತ್ತದೆ. ಇಂಗ್ಲಿಶಿನ “killed him/herself” ಅನ್ನೋದು ಹೆಚ್ಚು ತಟ್ಟುವಂತಹ ರೂಪ ಎಂದು ನನ್ನ ಗೆಳೆಯ ತಿಳಿಯುತ್ತಾನೆ.
ಇದಕ್ಕೆ ಓಸುಗರ(ಕಾರಣ) ಹೀಗಿರಬಹುದು – ಒಂದು ನುಡಿಯಿಂದ ಇನ್ನೊಂದು ನುಡಿಗೆ ಮಾಡೊರೆಗಳು ನೇರವಾಗಿ ಬರಲಾಗದು. ಅವು ಹೆಸರೊರೆಯಾಗಿ ಬಂದು ಮತ್ತೆ ಮಾಡೊರೆಯಾಗಿ ಬದಲಾಗಬೇಕಾಗುತ್ತದೆ. ಹಾಗೆ ನೇರವಾಗಿ ಬಂದಾಗಲೂ ಅದರ ಬದಲಿಗೆ ಪಡಕೊಂಡ ನುಡಿಯ ಒರೆಗಳೇ ಹೆಚ್ಚು ಗಟ್ಟಿ/ತಟ್ಟುತ್ತವೆ ಅನಿಸುತ್ತದೆ.
ಅದೇ ಧಾಟಿಯಲ್ಲಿ ಯೋಚಿಸುವಾಗ ಕನ್ನಡದಲ್ಲೂ ಹಾಗೇ ಆಗುತ್ತದಲ್ಲ ಅನಿಸಿತು. ಕನ್ನಡದ ಎಸಗೊರೆಗಳು ತಾವಾಗಿ ಸೊಲ್ಲರಿಮೆಯ ಮಾರ್‍ಪಾಟುಗಳನ್ನು ಯಾವುದೇ ಎಗ್ಗಿಲ್ಲದೆ ಪಡಕೊಳ್ಳುತ್ತವೆ. “ಕೇಳಿದೆ”, “ನೋಡಿದೆ”, “ಹಾಡಿದೆ” ಇವು ಬೇರೆ ನುಡಿಯ ಮಾಡೊರೆಯಿಂದ ಬಂದುದಾದರೆ “ಪ್ರತಿಕ್ರಿಯಿಸಿದೆ”, “ವರ್‍ಣಿಸಿದೆ”, “ನಿರ್‍ಮಾಣ ಮಾಡಿದೆ” “ಗಾಯನ ಮಾಡಿದೆ” ಎಂದೆಲ್ಲಾ ಆಗುತ್ತವೆ. ಮಾತಿನ ಓಟದ ಚುರುಕಿಗೆ ಹಾಗು ಪರಿಣಾಮಕ್ಕೆ ಕನ್ನಡದ ರೂಪಗಳೇ ಹೆಚ್ಚು ಸರಿ ಅನಿಸುತ್ತದೆ.
ಸಂಸ್ಕ್ರುತದಿಂದ ಕನ್ನಡಕ್ಕೆ ಬಂದ ಎಸಗೊರೆಗಳು ಹೀಗಾಗುವುದರಲ್ಲಿ ಎರಡು ರೂಪಗಳು ಕಂಡಿತು (ಇನ್ನೂ ಹೆಚ್ಚಿರಬಹುದು)
ಒಂದು – “ಮಾಡು” ಎಂಬ ಹೆಚ್ಚಿನ ಒರೆ ಬೇಕಾಗುವುದು. suicideಗೆ commit ಅನ್ನುವ ಹಾಗೆ, ಗಾಯನ ಮಾಡು, ವರ್‍ಣನೆ ಮಾಡು… ಹೀಗೆ
ಎರಡು – “ಇಸು” ಎಂಬುದನ್ನು ಸೇರಿಸಬೇಕಾಗುವುದು “ವರ್‍ಣಿಸು”, “ಕರುಣಿಸು”, (ಕನ್ನಡವೇ ಅನ್ನಿಸುವ ತದ್ಭವಗಳಿಗೂ ಇದು ದಿಟ ಅನ್ನುವುದನ್ನು ಗಮನಿಸಿ : “ಬಣ್ಣಿಸು” ಎಂಬಂತೆ)
ಕನ್ನಡದಲ್ಲಿ “ಇಸು” ಎಂಬುದನ್ನೇ ಎರಡು ಬಗೆಯಲ್ಲಿ ಬಳಸುತ್ತೇವೆ.
ಮೊದಲನೆಯದು: ಕನ್ನಡದ ಒರೆಗಳಿಗೆ ಹಚ್ಚಿದಾಗ “ಇನ್ನೊಬ್ಬರು ಮಾಡುವಂತೆ ಮಾಡುವುದು” ಕೇಳಿಸು(ಕೇಳುವಂತೆ ಮಾಡು), ಹೇಳಿಸು(ಹೇಳುವಂತೆ ಮಾಡು), ಹಾಡಿಸು(ಹಾಡುವಂತೆ ಮಾಡು) ಅಂತಹ ರೂಪಗಳು.
ಎರಡನೆಯದು: ಬೇರೆ ನುಡಿಯ ಹೆಸರೊರೆಗಳಿಗೆ ಹಚ್ಚಿ, ಮಾಡೊರೆಯಾಗಿ ಬಳಸುವುದು : “ಚಿತ್ರಿಸು”, “ವಿಸ್ತರಿಸು(ಬಿತ್ತರಿಸು)”… ಹೀಗೆ.
ಇದರಿಂದ ಗೊಂದಲಗಳು ಏಳುವುವು. ಅದೂ ಅಲ್ಲದೇ ಹೀಗೆ ಎಲ್ಲ ಪದಗಳಿಗೂ ಮಾಡಲು ಬರುವುದೇ?
ಪತ್ರ => ಪತ್ರಿಸು?
ದರ್‍ಶನ => ದರ್‍ಶನಿಸು?
ಶಾಕೆ => ಶಾಕಿಸು/ಶಾಕೆಯಿಸು?
- ಅನಿವಾಸಿ
ನೇಸರ
ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು
ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ
ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು
ಬೂಡು = ಒಡೆಯನ ಮನೆ, ಮನೆ, ಬೀಡು
ಮಲೆಯ ತಲೆ = peak, ಬೆಟ್ಟದ ತುದಿ
ನೇಸರ = sun
-
Archives
- December 2009 (1)
- August 2009 (1)
- June 2009 (3)
- May 2009 (1)
- April 2009 (1)
- March 2009 (6)
- January 2009 (1)
-
Categories
-
RSS
Entries RSS
Comments RSS
![180px-places_of_articulationsvg ಉಲಿಗಳು ಹುಟ್ಟುವ ತಾವುಗಳು[wikipedia]](http://tiligannada.files.wordpress.com/2009/03/180px-places_of_articulationsvg.png)